ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಅಂತರರಾಷ್ಟ್ರೀಯ ಗಣಿತ ದಿನಾಚರಣೆ

ಕಲಬುರಗಿ,ಮಾ.14-“ಮಗುವಿನ ಶಿಕ್ಷಣವು ಅ, ಆ ಇ, ಈ (ಮಾತೃಭಾಷೆ) ಮತ್ತು 1, 2, 3, 4 (ಗಣಿತ) ದಿಂದ ಪ್ರಾರಂಭವಾಗುತ್ತದೆ, ಆದ್ದರಿಂದ ಇದನ್ನು ಪಿತೃ ಭಾಷೆ ಎಂದು ಕರೆಯಲಾಗುತ್ತದೆ” ಎಂದು ವಾರಂಗಲ್‍ನ ಎನ್‍ಐಟಿ ಗಣಿತಶಾಸ್ತ್ರದ ಪ್ರಾಧ್ಯಾಪಕ ಪ್ರೊ.ವೈ.ಎನ್.ರೆಡ್ಡಿ ಹೇಳಿದರು.
ಅವರು ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗಣಿತ ವಿಭಾಗ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಯಾವುದೇ ಸಮಾಜಕ್ಕೆ ಗಣಿತ ಬಹಳ ಮುಖ್ಯ. ಸಮಾಜವನ್ನು ಮುನ್ನಡೆಸಲು ಗಣಿತ ಬೇಕು. ಇದು ಆಯ್ಕೆಯಲ್ಲ, ಗಣಿತವನ್ನು ಕಲಿಯುವುದು ಕಡ್ಡಾಯವಾಗಿದೆ. ಏಕೆಂದರೆ ಅದು ಸಾರ್ವತ್ರಿಕ ಮತ್ತು ಜಾಗತಿಕ ಭಾಷೆ. ಗಣಿತವು ಮಾನವನ ಮೆದುಳನ್ನು ಚುರುಕುಗೊಳಿಸುತ್ತದೆ ಆ ಮೂಲಕ ವ್ಯಕ್ತಿಯ ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಸುಧಾರಿಸುತ್ತದೆ. ಆದ್ದರಿಂದ ಸಮಸ್ಯೆಗಳನ್ನು ಪರಿಹರಿಸಲು ಗಣಿತದ ಜ್ಞಾನವು ಬಹಳ ಮುಖ್ಯವಾಗಿದೆ” ಎಂದು ಹೇಳೀದರು.
ಕುಲಸಚಿವರಾದ ಪ್ರೊ. ಬಸವರಾಜ ಪಿ ಡೋಣೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಪ್ರತಿಯೊಬ್ಬ ಮನುಷ್ಯನು ಜೀವನ ನಡೆಸಲು ಗಣಿತ ಅಗತ್ಯ. ವಿದ್ಯಾವಂತರಷ್ಟೇ ಅಲ್ಲ, ಅನಕ್ಷರಸ್ಥರೂ ಕೂಡ ತಮ್ಮ ದಿನನಿತ್ಯದ ವಹಿವಾಟು ನಡೆಸಲು ಸಂಖ್ಯೆಗಳನ್ನು ಬಳಸುತ್ತಾರೆ. ಸಾಹಿತ್ಯ ಕಥೆ ಕಾದಂಬರಿಗಳಲ್ಲಿ ಸಂಖ್ಯೆಗಳಿಗಿಂತ ಮೌಲ್ಯಗಳು ಮತ್ತು ಭಾವನೆಗಳು ಹೆಚ್ಚಿನ ಪಾತ್ರವಹಿಸುತ್ತವೆ. ಆದರೂ ಕೂಡ ಸಂದರ್ಭಗಳನ್ನು ಮತ್ತು ಭಾವನೆಗಳನ್ನು ಪ್ರಮಾಣೀಕರಿಸಲು ಸಂಖ್ಯೆಗಳನ್ನು ಬಳಸುತ್ತೇವೆ. ಕಥೆಯು ಒಂದಾನೊಂದು ಕಾಲದಲ್ಲಿ ಪ್ರಾರಂಭವಾಗಿ ಮತ್ತೊಂದು ಕಾಲದಲ್ಲಿ ಕೊನೆಗೊಳ್ಳುತ್ತದೆ. ಸಂಖ್ಯೆಗಳನ್ನು ನಿಖರವಾಗಿ ಬಳಸದಿದ್ದರೂ, ಅವು ಕಥೆಯ ಭಾಗವಾಗುತ್ತವೆ” ಎಂದು ಹೇಳಿದರು.
ಡಾ. ದೀಪಕ್ ಸ್ಯಾಮ್ಯುಯೆಲ್, ಡೀನ್ ಸ್ಕೂಲ್ ಆಫ್ ಫಿಸಿಕಲ್ ಸೈನ್ಸ್ ಸಹ ಈ ಸಂದರ್ಭದಲ್ಲಿ ಮಾತನಾಡಿ, “ಪೈ (ಠಿ) ಎಂಬುದು ಭಾಷೆಯಲ್ಲಿರುವ ಸ್ವರಗಳಿದ್ದಂತೆ. ಸ್ವರಗಳಿಲ್ಲದ ವಾಕ್ಯಗಳಿಲ್ಲ, ಆದ್ದರಿಂದ ಪೈ ಇಲ್ಲದೆ ಸಮೀಕರಣಗಳಿಲ್ಲ” ಎಂದು ಹೇಳಿದರು.
ಇದಕ್ಕೂ ಮುನ್ನ ಗಣಿತ ವಿಭಾಗದ ಮುಖ್ಯಸ್ಥ ಡಾ. ಜಿ. ಜನಾರ್ದನ ರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ “1988 ರಿಂದ ಮಾರ್ಚ್ 14 ರಂದು ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಪೈ ದಿನ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ನಾವು ಗಣಿತದ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ಸೇರಿದಂತೆ ಅನೇಕsÀ ಚಟುವಟಿಕೆಗಳನ್ನು ಆಯೋಜಿಸಿದ್ದೇವೆ” ಎಂದರು.
ಡಾ. ಮೇಘಾ ಕಂಡೇಲವಾಲ್ ಕಾರ್ಯಕ್ರಮ ನಿರೂಪಿಸಿದರು, ಡಾ.ರಂಗನಾಥ್ ವಂದಿಸಿದರು. ಈ ಸಂದರ್ಭದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಆಹ್ವಾನಿತರು ಉಪಸ್ಥಿತರಿದ್ದರು.