
ಬೀದರ:ಮೇ.18:ಕರ್ನಾಟಕ ಪದವಿಪೂರ್ವ ಕಾಲೇಜಿನ ವಾಣಜ್ಯ ವಿಭಾಗದ ಸಿದ್ಧಾರ್ಥ ಎಂ. ಅವರು 600ಕ್ಕೆ 591 ಅಂಕ ಪಡೆದು ಶೇ. 98.5% ಫಲಿತಾಂಶ ಪಡೆವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದದ್ದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ನುಡಿದರು.
ಅವರು ನಗರದ ಕರ್ನಾಟಕ ಪದವಿ ಪೂರ್ವ ಕಾಲೇಜು ಬೀದರ್ ಆಯೋಜಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಮಕ್ಕಳಿಗಾಗಿ ಆಸ್ತಿ ಮಾಡುವುದು ಬೇಡ, ವಿದ್ಯೆಯನ್ನು ಕಲಿಸಿ ಮಕ್ಕಳೆ ಆಸ್ತಿಯಾಗಬೇಕು ಯಾರೂ ಕದಿಯದ ಆಸ್ತಿ ಎಂದರೆ ಅದು ವಿದ್ಯೆ. ಆಧುನಿಕ ಜಗತ್ತು ಸ್ಪರ್ಧಾಯುಗವಾಗಿದೆ ಇಲ್ಲಿ ಗುರಿ ಸಾಧಿಸುವ ಛಲವಿದ್ದವರು ಯಶಸ್ಸು ಪಡೆದು ಅಪೇಕ್ಷೆ ಪಟ್ಟಂತೆ ಫಲಿತಾಂಶವನ್ನು ಪಡೆಯಲು ಸಾಧ್ಯ. ಪ್ರತಿಭೆ ಎಲ್ಲರಲ್ಲೂ ಇದೆ, ಆದರೆ ಅವಕಾಶಗಳಿಲ್ಲವೆಂದು ಕೈ ಕಟ್ಟಿ ಕೂಡದೆ ಇರುವ ವ್ಯವಸ್ಥೆಯಲ್ಲಿ ಅವಕಾಶಗಳನ್ನು ಸೃಷ್ಠಿಸಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಒಳ್ಳೆಯ ಆದರ್ಶ ಇಟ್ಟುಕೊಂಡು ಬದುಕಬೇಕು ನಾವು ಎಷ್ಟು ದಿನ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದೂ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪರಿಶ್ರಮವಿರಬೇಕೆಂದು ನುಡಿಯುತ್ತ ಅತ್ಯುನ್ನತ ಅಗ್ರಶ್ರೇಣಿಯಲ್ಲಿ ತೇರ್ಗಡೆಗೊಂಡು ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಬಿ ಜಿ ಶೆಟಕಾರ ಅವರು ಮಾತನಾಡುತ್ತ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗಬೇಕು. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಈ ಕಾಲದಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದವರು ಅನಕ್ಷರಸ್ಥರಿದ್ದಂತೆ. ನಿರಂತರ ಓದು ಯಶಸ್ಸ್ಸಿನ ಗುಟ್ಟು ಎಂದು ಹೇಳುತ್ತಲೆ ನೌಕರಿಗಾಗಿ ಓದಬೇಡಿ ನೌಕರಿಗಳನ್ನು ಸೃಷ್ಠಿಸಲು ಓದಬೇಕು. ವಿದ್ಯಾರ್ಥಿಗಳು ಉದಾತ್ತ ಗುರಿ ಹೊಂದಿರಬೇಕು ತಾಯಿ ತಂದೆಯವರ ಕಷ್ಟಗಳನ್ನು ನೆನಪಿಟ್ಟು ಅವರ ಹೆಸರಿಗೆ ಚ್ಯುತಿ ಬರದಂತೆ ಒಳ್ಳೆಯ ಮಾನವರಾಗಿ, ಸಮಾಜದ, ರಾಷ್ಟ್ರದ ಅಭಿವೃದ್ಧಿ ಪೂರಕವಾಗಿ ಮುನ್ನಡೆಯಬೇಕು.
ಕರ್ನಾಟಕ ಪದವಿ ಕಾಲೇಜಿನ ಉಪಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ ಅವರು ಮಾತನಾಡುತ್ತ ಕರಾಶಿ ಸಂಸ್ಥೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು ಕರ್ನಾಟಕ ಪದವಿ ಕಾಲೇಜು ನೂತನ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿದ್ದು ಪದವಿ ಹಂತದಲ್ಲಿಯೂ ಅನೇಕ ಹೊಸ ವೃತ್ತಿ ಕೇಂದ್ರಿತ ಕೋರ್ಸುಗಳನ್ನು ತರಲಾಗಿದೆ. ಎಂದು ಹೇಳುತ್ತ ಪಿಯುಸಿ ನಂತರ ಇರುವ ಹೊಸ ಸಾಧ್ಯತೆಗಳ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಕರಾಶಿ ಸಂಸ್ಥೆಯ ಕಾರ್ಯದರ್ಶಿಗಳಾದ ಸಿದ್ರಾಮ ಪಾರಾ, ಆಡಳಿತ ಮಂಡಳಿಯ ನಿರ್ದೇಶಕರಾದ ಶೆಟಕಾರ ಚಂದ್ರಕಾಂತ, ವೀರಭದ್ರಪ್ಪ ಬುಯ್ಯಾ, ರಾಜಶೇಖರ ತಾಂಡೂರ, ಸಿದ್ರಾಜ ಪಾಟೀಲ, ರವಿ ಹಾಲಹಳ್ಳಿ, ಉಪಸ್ಥಿತರಿದ್ದರು.
ಜಿಲ್ಲೆಗೆ ಪ್ರಥಮ, ರ್ಯಾಂಕ್ ಬಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಿದ್ದಾರ್ಥ, ಕಲಾ ವಿಭಾಗದಲ್ಲಿ 95.5% ಅಂಕ ಗಳಿಸಿದ ಪ್ರಿಯಾಂಕಾ ನಾಗಶೆಟ್ಟ, ವಿಜ್ಞಾನ ವಿಭಾಗದ 91.66% ಪಡೆದ ಅಕ್ಷಯ ಪಾಲಮ್, ಅವರಿಗೆ ತಲಾ ರೂ. ಐದು ಸಾವಿರ ಜೊತೆಗೆ ಕನ್ನಡದಲ್ಲಿ 99 ಅಂಕ ಪಡೆದ ವಾಣಿಜ್ಯ ವಿಭಾಗದ ರಾಮ ಅವರಿಗೆ ರೂ. ಎರಡು ಸಾವಿರ ನಗದು ಬಹುಮಾನ ನೀಡಲಾಯಿತು. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಅಗ್ರಶ್ರೇಣಿ ಪಡೆದ 56 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವಿಶೇಷವಾಗಿ ಗಣಿತ ಉಪನ್ಯಾಸಕರಾದ ಮಹೇಶ ಬಿರಾದಾರ ಹಾಗೂ ನೂರಕ್ಕೆ ನೂರು ಅಂಕ ಪಡೆಯಲು ನೆರವಾದ ಉಪನ್ಯಾಸಕರಾದ ಡಾ. ಮೀನಾಕ್ಷಿ ಪಾಟೀಲ, ಪದ್ಮಾಕರ ಅವರನ್ನೂ ಸನ್ಮಾನಿಸಲಾಯಿತು.
ಅಗ್ರಶ್ರೇಣಿ ಪಡೆದ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನಬಗ್ಗೆ ಅಭಿರಾಯ ಹಂಚಿಕೊಂಡರು, ಕಾಲೇಜಿನ ಉಪನ್ಯಾಸಕರು, ಪಾಲಕರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಬಸವರಾಜ ಬಲ್ಲೂರ ಸ್ವಾಗತಿಸಿದರೆ ಸಚಿನ್ ವಿಶ್ವಕರ್ಮ ನಿರೂಪಿಸಿದರು. ಜ್ಯೋತಿ ಪಾಟೀಲ ವಂದಿಸಿದರು.