ಕರ್ನಾಟಕ ಕಾಲೇಜು ಅಭಿವೃದ್ಧಿಗೆ 25 ಲಕ್ಷ ಅನುದಾನ: ರಹಿಂಖಾನ್ ಘೋಷಣೆ

ಬೀದರ್:ಜು.23: ಕರ್ನಾಟಕ ಕಾಲೇಜು ಶಿಸ್ತು ಮತ್ತು ಬದ್ಧತೆಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಶಿಸ್ತುಬದ್ಧ ತರಗತಿ ಕೋಣೆಗಳು, ಪ್ರಯೋಗಾಲಯಗಳು, ಕಚೇರಿ ಕೋಣೆಗಳನ್ನು ನೋಡಿದರೆ ಇದೊಂದು ಅತ್ಯುತ್ತಮ ಸಂಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಡಿಯಲ್ಲಿನ ಕರ್ನಾಟಕ ಕಾಲೇಜು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಶಾಸಕ ರಹಿಂಖಾನ್ ನುಡಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ನೂತನ ಗಣಕಯಂತ್ರ ವಿಜ್ಞಾನ ಪ್ರಯೋಗಾಲಯ ರಿಬ್ಬನ್ ಕಟ್ ಮಾಡುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
“ನಾನು ಕೂಡ ಇದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇಲ್ಲಿ ಕಲಿತ ಪಾಠ ಮತ್ತು ಆಟ ಇಂದಿಗೂ ಮರೆತಿಲ್ಲ. ಇಂದಿನ ಕಾಲದಲ್ಲಿ ಒಂದು ಕುಟುಂಬ ನಡೆಸುವುದಕ್ಕೆ ಎಷ್ಟೋ ಕಷ್ಟವಾಗುತ್ತದೆ. ಆದರೆ ಇಂತಹ ಬೃಹತ್ ಕಾಲೇಜನ್ನು ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಸಿಬ್ಬಂದಿಗಳು, ಪದಾಧಿಕಾರಿಗಳು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವುದು. ತನ್ಮೂಲಕ ಮಕ್ಕಳ ಬಾಳಿನ ಬೆಳಕಾಗಿ ಅವರ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿರುವುದು ಸ್ಮರಣೀಯ. ಹೀಗಾಗಿ ಅಧ್ಯಕ್ಷರ ಮನವಿಯಂತೆ ಕಾಲೇಜಿನ ಅಭಿವೃದ್ಧಿಗೆ ರೂ. 25 ಲಕ್ಷ ಅನುದಾನ ನೀಡಲಾಗುವುದು. ಮೊದಲ ಕಂತಿನಲ್ಲಿ 10 ಲಕ್ಷ ತಕ್ಷಣವೇ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಳ ಸಜ್ಜನಿಕೆಯ ಶಾಸಕ ಎಂದರೆ ರಹಿಂಖಾನ್. ಬಡವರು, ಅಸ್ಪೃಶ್ಯರು ಹಾಗೂ ಹಿಂದುಳಿದವರು ಎಂದರೆ ರಹಿಂಖಾನ್ ಅವರಿಗೆ ತುಂಬಾ ಅಕ್ಕರೆ. ಕರೆಯದೇ ಬಡವರ ಕಾರ್ಯಕ್ರಮಕ್ಕೆ ಹೋಗುವ ಸರಳಜೀವಿ ಇವರು. ಕರ್ನಾಟಕ ಕಾಲೇಜಿಗೂ ಅವರಿಗೂ ನಂಟಿದೆ. ಹೀಗಾಗಿ ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ರೂ. 25 ಲಕ್ಷ ಅನುದಾನ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಪ್ರಚಾರ್ಯ ಡಾ. ಎಮ್.ಎಸ್.ಚೆಲ್ವಾ ಸ್ವಾಗತಿಸಿದರು. ಡಾ. ಬಿ.ವಿ. ರವಿಚಂದ್ರನ್ ನಿರೂಪಿಸಿದರೆ ಅಶೋಕ ಹುಡೇದ್ ವಂದಿಸಿದರು. ಕಾರ್ಯಕ್ರಮದಲ್ಲಿ ಕರಾಶಿ ಸಂಸ್ಥೆ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಸಿದ್ರಾಮ ಪಾರಾ, ನಿರ್ದೇಶಕ ರವಿ ಹಾಲಹಳ್ಳಿ, ವಿಜ್ಞಾನ ಗಣಕಯಂತ್ರ ವಿಭಾಗದ ಮುಖ್ಯಸ್ಥ ಶ್ರೀಕಾಂತ ದೊಡ್ಡಮನಿ, ಪ್ರಮುಖರಾದ ವೀರಭದ್ರಪ್ಪ ಬುಯ್ಯಾ, ಶ್ರೀನಾಥ ನಾಗೂರೆ, ಡಾ. ಜಗನ್ನಾಥ ಹೆಬ್ಬಾಳೆ, ಪೆÇ್ರ. ರಾಜೇಂದ್ರ ಬಿರಾದಾರ, ಬಸವರಾಜ ಕೂಡಂಬುಲ್, ಅನೀಲಕುಮಾರ ಚಿಕ್ಕಮಾಣೂರ ಸೇರಿದಂತೆ ಅನೇಕರಿದ್ದರು.