ಕರ್ನಾಟಕ ಕಾಲೇಜಿನಲ್ಲಿ ಡಿ.ಸಿ. ಪಾವಟೆ 123 ನೇ ಜನ್ಮದಿನ ಆಚರಣೆ

ಬೀದರ್: ಆ.6:ಭಾರತದ ಸಂಸ್ಕøತಿ ಜಗತ್ತಿನ ಇತಿಹಾಸದಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಕøತಿ ಹೊಂದಿದೆ. ಇಲ್ಲಿ ಹಲವು ಭಾಷೆ, ಜಾತಿ-ಧರ್ಮಗಳ ಜನರು ವೈವಿಧ್ಯತೆಯಿಂದ ಬದುಕುತ್ತಾರೆ. ಅನೇಕತೆಯಲ್ಲಿ ಏಕತೆ ಕಾಣುವ ಏಕೈಕ ದೇಶ ಭಾರತ. ಇಲ್ಲಿನ ಜನಜೀವನ, ಶಿಕ್ಷಣ, ಆಚಾರ-ವಿಚಾರಗಳೆಲ್ಲವೂ ವಿಭಿನ್ನ ಮತ್ತು ಮಾದರಿ. ಹೀಗಾಗಿಯೇ ಇಂದು ಜಗತ್ತು ಭಾರತದ ಕಡೆಗೆ ತಲೆಯೆತ್ತಿ ನೋಡುತ್ತಿದೆ. ವಿಶ್ವಕ್ಕೆ ಸೊನ್ನೆ ಪರಿಚಯಿಸಿದ ದೇಶ ಭಾರತ. ಯೋಗ ತಿಳಿಸಿಕೊಟ್ಟದ್ದು ನಮ್ಮ ದೇಶ. ಹಲವು ವಿಸ್ಮಯಗಳಿಗೆ ಕಾರಣವಾದ ಭಾರತದಲ್ಲಿ ಜನಿಸಿದ ನಾವೇ ಧನ್ಯರು ಎಂದು ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ವಿಸ್ತಾರಕ ಆರ್. ಕಾರುಣ್ಯನಿಧಿ ನುಡಿದರು.

ಕರ್ನಾಟಕ ಕಾಲೇಜು, ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಘಟಕ ಬೀದರ, ನ್ಯಾಶನಲ್ ಕೌನ್ಸಿಲ್ ಫಾರ್ ಸೈನ್ಸ್ ಮತ್ತು ಸೈಂಟಿಫಿಕ್ ಟೆಂಪರ್‍ಮೆಂಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಗಣಿತಜ್ಞ ಡಾ. ಡಿ.ಸಿ.ಪಾವಟೆ ಜನ್ಮದಿನ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಗೌರವ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಪ್ರತಿಭಾ ಚಾಮಾ ಮಾತನಾಡಿ “ಇಂದಿನ ಆಧುನಿಕರಣ ಮತ್ತು ಯಾಂತ್ರಿಕರಣಕ್ಕೆ ಒಗ್ಗಿಕೊಂಡ ಯುವ ಪೀಳಿಗೆ ಯಾಂತ್ರಿಕ ಜೀವನ ನಡೆಸುವ ಮೂಲಕ ಬಹುತೇಕ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಒಂದೇ ಸಾರಿ ಸಂಕ್ಷಿಪ್ತ ಮಾರ್ಗದಲ್ಲಿ ಬೆಳೆಯಬೇಕೆನ್ನುವ ಹಪಾಹಪಿತನ, ಪ್ರಯತ್ನರಹಿತ ಜೀವನ, ಶ್ರಮವಿಲ್ಲದ ಸಾಧನೆ ಇದೆಲ್ಲವೂ ವ್ಯಕ್ತಿತ್ವಕ್ಕೆ ಮಾರಕ. ಆದ್ದರಿಂದ ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉನ್ನತ ಸಾಧನೆಯೆಡೆಗೆ ಸಾಗಬೇಕೆಂದು ಸಲಹೆ ನೀಡಿದರು.

ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿನಾಥ ಮಠಪತಿ ಮಾತನಾಡಿ “ಖ್ಯಾತ ಗಣಿತಜ್ಞ ಡಾ. ಡಿ.ಸಿ.ಪಾವಟೆಯವರ ಸಮಗ್ರ ಪರಿಚಯ ಮಾಡಿಕೊಟ್ಟರು. ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕ ಬಸವರಾಜ ಕೂಡಂಬುಲ್ ಮಾತನಾಡಿದರು. ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ಯೋಜನೆಯ ಬಿ.ಎಸ್.ಸಿ. 2ನೇ ಸೆಮಿಸ್ಟರ್ ಗಣಿತ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ರಾ.ಶಿ. ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ವಹಿಸಿದ್ದರು. ಇದೇ ವೇಳೆ ಕರಾಶಿ ಸಂಸ್ಥೆಯ ನಿರ್ದೇಶಕ ಸಿದ್ಧರಾಜ ಪಾಟೀಲ, ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಉಪಾಧ್ಯಕ್ಷ ಡಾ. ವೀರೇಶ ರಾಂಪೂರ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪದ್ಮಿನಿ ಕಾಜಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಡಿ.ಬಿ.ಕಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.