ಕರ್ನಾಟಕ ಏಕತಾ ವೇದಿಕೆಯಿಂದ ಕರುನಾಡ ಹಬ್ಬ

ದಾವಣಗೆರೆ. ನ.17; ಕರ್ನಾಟಕ ಏಕತಾ ವೇದಿಕೆ ವತಿಯಿಂದ ನ.೧೮ ರಿಂದ ೨೦ ರವರೆಗೆ ಮೂರು ದಿನಗಳ ಕಾಲ‌ ಕನ್ನಡ ರಾಜ್ಯೋತ್ಸವ ಕರುನಾಡ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಎನ್.ಹೆಚ್ ಹಾಲೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.೧೮ ರಂದು ಬೆಳಗ್ಗೆ ೧೧ ಕ್ಕೆ ನಗರದ ಪ್ರಮುಖ ವೃತ್ತಗಳ ಮಹನೀಯರ ಪುತ್ಥಳಿಗಳ ಸ್ವಚ್ಚತೆಗೊಳಿಸುವ ಕಾರ್ಯಕ್ರಮ ಹಾಗೂ ಅನಾಥ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳ ವಿತರಣೆ ಹಮ್ಮಿಕೊಳ್ಳಲಾಗಿದೆ.ನ.೧೯ ರಂದು ಬೆಳಗ್ಗೆ ೧೧ ಕ್ಕೆ ಡಾ.ಪುನೀತ್ ರಾಜ್ ಕುಮಾರ್ ನೆನಪಿನಾರ್ಥ ಜಯದೇವವೃತ್ತದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ನಂತರ ಬಾತಿ ವೃದ್ದಾಶ್ರಮದಲ್ಲಿ ವಯೋವೃದ್ದರಿಗೆ ಬಟ್ಟೆ ವಿತರಣಾ ಕಾರ್ಯಕ್ರಮ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಗುವುದು ಎಂದರು.ನ.೨೦ ರ ಸಂಜೆ ೬ ಕ್ಕೆ ನಗರದ ಶಿವಯೋಗಿ ಮಂದಿರದಲ್ಲಿ ನಡೆಯುವ ಕರುನಾಡ ಹಬ್ಬ ನಡೆಯಲಿದ್ದು ಮುರುಘಾಮಠದ ಪೀಠಾಧ್ಯಕ್ಷರಾದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ವೇದಿಕೆ ರಾಜ್ಯಾಧ್ಯಕ್ಷ ಎನ್.ಹೆಚ್  ಹಾಲೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಸದ ಜಿ.ಎಂ ಸಿದ್ದೇಶ್ವರ್ ಉದ್ಘಾಟನೆ ನೆರವೇರಿಸಲಿದ್ದಾರೆ.ಶಾಸಕ ಶಾಮನೂರು ಶಿವಶಂಕರಪ್ಪ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಗರದ ಗಣ್ಯರು ಆಗಮಿಸಲಿದ್ದಾರೆ.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ನೆರವೇರಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ  ಮಂಜುನಾಯ್ಕ್,ಬಿ.ಹೆಚ್. ರಹಮತ್, ಹೆಚ್.ವಿ. ಪ್ರಶಾಂತ್, ದೇವೇಂದ್ರಪ್ಪ, ಚಂದ್ರಪ್ಪ, ಮಲ್ಲಿಕಾರ್ಜುನಪ್ಪ, ರಾಜು ಕೋಡಿಹಳ್ಳಿ ಉಪಸ್ಥಿತರಿದ್ದರು.