ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಪ್ರಯುಕ್ತ ಮದ್ಯ ಮಾರಾಟ ನಿಷೇಧಿಸಿ ಡಿ.ಸಿ. ಆದೇಶ

ಕಲಬುರಗಿ:ಮೇ.18:ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ-2024 ಹಿನ್ನೆಲೆಯಲ್ಲಿ 2024ರ ಜೂನ್ 3ರಂದು ಮತದಾನ ನಡೆಯಲಿದೆ. ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯದ ಕೊನೆಯ 48 ಗಂಟೆ ಅವಧಿಯಲ್ಲಿ ಅಂದರೆ 2024ರ ಜೂನ್ 1ರ ಸಂಜೆ 4 ಗಂಟೆಯಿಂದ ಜೂನ್ 3ರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಮದ್ಯಮಾರಾಟ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯ ಮಾರಾಟ, ಶೇಖರಣೆ, ಮದ್ಯಪಾನ ನಿಷೇಧಿಸಿ ಜನತಾ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 135 (ಸಿ) ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳು ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10 (ಬಿ) ರಂತೆ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಬಾರ್‍ಗಳು, ಕ್ಲಬ್‍ಗಳು, ಬಾರ್ ಮತ್ತು ರೆಸ್ಟೋರೆಂಟ್, ಮದ್ಯದ ಡೀಪೋಗಳನ್ನು (ಕೆ.ಎಸ್.ಬಿ.ಸಿ.ಎಲ್. ಕಲಬುರಗಿ ನಗರ ಹಾಗೂ ಜಿಲ್ಲೆ ಒಳಗೊಂಡಂತೆ) ಮುಚ್ಚಲು ಮತ್ತು ಮದ್ಯದ ಮಾರಾಟ, ಸಾಗಾಟ ನಿಷೇಧಿಸಿ ಶುಷ್ಕ ದಿನ (ಆಡಿಥಿ ಆಚಿಥಿs) ಗಳೆಂದು ಘೋಷಿಸಲಾಗಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಜನತಾ ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1951ರ ಕಲಂ 135ಸಿ (2) ಮತ್ತು (3) ರನ್ವಯ ಶಿಕ್ಷೆಗೆ ಒಳಪಡಿಸಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿದೆ.