ಕರ್ನಾಟಕ ಇತಿಹಾಸದಲ್ಲಿ ಇಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ : ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ

ಬಸವಕಲ್ಯಾಣ : ಜ.7: ಕರ್ನಾಟಕ ಇತಿಹಾಸದಲ್ಲಿ ಇಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೇಳಿದರು, ಜಗತ್ತಿನ ಮೊದಲ ಪಾರ್ಲೆಮೆಂಟ್ ಎಂದು ಹೇಳಲಾಗುವ ಇಲ್ಲಿನ ಹಳೆಯ ಅನುಭವ ಮಂಟಪದ ಹತ್ತಿರ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದ ಅವರು ಇದು ಪೂರ್ವಜನ್ಮದ ಪುಣ್ಯ ಕಾರ್ಯ ಎಂದು ತಿಳಿಸಿದರು. ಅನುಭವ ಮಂಟಪದ ನಿರ್ಮಾಣಕ್ಕೆ ಈಗಾಗಲೇ 100 ಕೋಟಿ ರೂ ಬಿಡುಗಡೆ ಮಾಡಿದ್ದು, ಇನ್ನು 100 ಕೋಟಿ ರೂಗಳನ್ನು ವಾರದೊಳಗೆ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣವಾದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಿ ಭವ್ಯವಾಗಿ ನಿರ್ಮಿಸಲಾಗುದು ಎಂದು ತಿಳಿಸಿದರು. ಸಾಧನೆ ಮಾತನಾಡಬೇಕು. ಮಾತಾಡುವುದು ಸಾಧನೆಯಾಗಬಾರದು ಎನ್ನುವುದು ತಮ್ಮ ಮನೋಭಾವವಾಗಿದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಅಂತೆಯೇ ಎರಡು ವರ್ಷದೊಳಗೆ ಅನುಭವ ಮಂಟಪ ನಿರ್ಮಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಸ್ತದಿಂದ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಅನುಭವ ಮಂಟಪವು ಆದರ್ಶ ಸಂಸತ್ತಿನ ಮಾದರಿಯಾಗಿದೆ ಎಂದರು. ಸಾಮಾಜಿಕ ಬದಲಾವಣೆ ತರುವಲ್ಲಿ ಅನುಭವ ಮಂಟಪದ ಪಾತ್ರವು ಅತೀ ಮಹತ್ವದ್ದಾಗಿದೆ. ಮನುಕುಲದ ಏಳ್ಗೆಗೆ ಇಡೀ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ ಎಂದರು. ಅಣ್ಣ ಬಸವಣ್ಣನವರು ಈ ಕಲ್ಯಾಣ ನಾಡಿನಿಂದ ಹೊರಹೊಮ್ಮಿದ ಈ ದೇಶ ಕಂಡ ಬಹುದೊಡ್ಡ ವಿಶ್ವಗುರು ಅನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು. ಗೋ.ರು.ಚ ಅವರಂತಹ ಇನ್ನೂ ಅನೇಕ ಹಿರಿಯ ಸಾಹಿತಿಗಳ ಸಲಹೆ ಪಡೆದು, ಈ ಭಾಗದ ಜನರ ಬೇಡಿಕೆಯಂತೆ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ, ಪ್ರತಿ ವರ್ಷ ಬಸವ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಗಳು, ಸಚಿವರು, ಸಂಸದರು, ಶಾಸಕರು, ಡಿಸಿ, ಸಿಇಓ, ಎಸ್ಪಿ, ಬಿಕೆಡಿಬಿ ಕಮಿಷನರ್ ಹಾಗೂ ಸಾವಿರಾರೂ ಬಸವ ಭಕ್ತಾದಿಗಳು ಸಮಾರಂಭಕ್ಕೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.