ಕರ್ನಾಟಕ ಆರ್ಥಿಕ ಹೊಣೆಗಾರಿಕೆ ವಿಧೇಯಕ ಅಂಗೀಕಾರ

ಬೆಂಗಳೂರು, ಮಾ. ೨೪- ರಾಜ್ಯದ ೨೦೨೧-೨೨ನೇ ಸಾಲಿನ ಆರ್ಥಿಕ ಕೊರತೆಯು ಆಂತರಿಕ ಉತ್ಪನ್ನದ ಶೇ. ೨೫ ರಷ್ಟನ್ನು ಮೀರಬಹುದು ಎಂಬ ಅಂದಾಜಿನ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿಂದು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೂ ಸರ್ಕಾರ ಅಂಗೀಕಾರ ಪಡೆಯಿತು.
ಇಂದು ಸದನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ ಅಂಗೀಕಾರದ ನಂತರ ಕಾಂಗ್ರೆಸ್ ಸದಸ್ಯರ ಧರಣಿ ನಡುವೆಯೇ ಈ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದು, ಸದನ ಅದಕ್ಕೆ ಧ್ವನಿಮತದ ಒಪ್ಪಿಗೆ ನೀಡಿತು.
೨೦೨೧-೨೨ನೇ ವರ್ಷದಲ್ಲಿ ಆರ್ಥಿಕ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ. ೪ ರಷ್ಟವರೆಗೂ ಉದ್ಭವಿಸಬಹುದು. ೨೦೨೧-೨೨ನೇ ವರ್ಷದ ಅವಧಿಯಲ್ಲಿ ಕೋವಿಡ್-೧೯ರ ಪೂರ್ವ ಹಂತಗಳಿಗೆ ಮಂದಗತಿಯ ಆರ್ಥಿಕ ಚೇತರಿಕೆಯ ಕಾರಣದಿಂದಾಗಿ ರಾಜಸ್ವ ಕೊರತೆಯು ಉದ್ಭವಿಸಬಹುದು, ೨೦೨೧-೨೨ನೇ ವರ್ಷದ ಒಟ್ಟು ಹೊಣೆಗಾರಿಕೆಗಳು ಅಂದಾಜು ಒಟ್ಟು ಆರ್ಥಿಕ ಉತ್ಪನ್ನದ ಶೇ. ೨೫ ರಷ್ಟನ್ನು ಮೀರಬಹುದು. ಹಾಗಾಗಿ ಕರ್ನಾಟಕ ಆರ್ಥಿಕ ಹೊಣೆಗಾರಿಕಾ ಅಧಿನಿಯಮ-೨೦೦೧ಕ್ಕೆ ತಿದ್ದುಪಡಿ ಅವಶ್ಯವೆಂದು ಪರಿಗಣಿಸಿ ಈ ವಿಧೇಯಕ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.