ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರಿಂದ ಸರ್ಕಾರಕ್ಕೆ 5 ವರದಿ ಸಲ್ಲಿಕೆ: ಟಿ.ಎಂ ವಿಜಯ್ ಭಾಸ್ಕರ್

ಮಂಡ್ಯ.ಮೇ.24:- ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ತಿಳಿದುಕೊಂಡು ಆಡಳಿತವನ್ನು ಸುಧಾರಣೆ ಮಾಡಲು ಬೇಕಿರುವ ಅಗತ್ಯತೆಗಳ ಬಗ್ಗೆ ಸರ್ಕಾರಕ್ಕೆ 5 ವರದಿಗಳನ್ನು ಸಲ್ಲಿಸಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಅಧ್ಯಕ್ಷರೂ ಆದ ನಿವೃತ್ತ ಐ.ಎ.ಎಸ್. ಅಧಿಕಾರಿ ಟಿ.ಎಂ. ವಿಜಯ್ ಭಾಸ್ಕರ್ ಅವರು ತಿಳಿಸಿದರು.
ಅವರು ಇಂದು ವಾಣಿಜ್ಯ ತೆರಿಗೆ ಇಲಾಖೆಗೆ ಭೇಟಿ ನೀಡಿ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಅವರ ಕೆಲಸಗಳು ಹಾಗೂ ಸಮಸ್ಯಗಳ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಿದರು. ಆಯೋಗವು ಈಗಾಗಲೇ 23 ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಕಾರ್ಯವೈಖರಿಗಳನ್ನು ಪರಿಶೀಲಿಸಿ ಅವರಿಂದ ಸಮಸ್ಯೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸಿ ಆಯೋಗವು ಅಧ್ಯಯನ ನಡೆಸಿ ಆನೇಕ ಶಿಫಾರಸ್ಸುಗಳನ್ನು ಮಾಡಿದೆ. ಇನ್ನೂ 16 ಇಲಾಖೆಗಳಿಗೆ ಆಯೋಗ ಭೇಟಿ ನೀಡಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವುದು ಬಾಕಿ ಇದೆ ಎಂದರು.
ಇದೇ ಸಂದರ್ಭದಲ್ಲಿ ಆಯೋಗದ ಸಲಹೆಗಾರರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಪ್ರಸನ್ನ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಬಾಲಸುಬ್ರಹ್ಮಣ್ಯ, ಸಹಾಯಕ ಆಯುಕ್ತ ಜಿ.ಹೆಚ್ ಪ್ರಸನ್ನಕುಮಾರ್, ಕಲ್ಯಾಣ್ ಕುಮಾರ್, ವಾಣಿಜ್ಯ ತೆರಿಗೆ ಅಧಿಕಾರಿ ಮಹದೇವ, ನಾಗೇಂದ್ರ, ಚಂದ್ರಶೇಖರ್ ಉಪಸ್ಥಿತರಿದ್ದರು.
ಆಯೋಗವು ಮೇ 23 ರಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶ(ವಿ.ಸಿ ಡಿವಿಷನ್), ಸಣ್ಣ ನೀರಾವರಿ ವಿಭಾಗ ಮತ್ತು ಉಪವಿಭಾಗೀಯ ಕಛೇರಿ, ಪಾಂಡವಪುರ ತಾಲ್ಲೂಕು ಖಜಾನೆ, ತಾಲ್ಲೂಕು ಮಟ್ಡದ ಅಂಕಿ ಅಂಶಗಳ ನಿರೀಕ್ಷಕರ ಭೇಟಿ, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಭೇಟಿ ನೀಡಲಿದೆ.
ಮೇ 24 ರಂದು ಜಿಲ್ಲಾ ಅಂಕಿ ಅಂಶಗಳ ಸಂಗ್ರಹಣಾಧಿಕಾರಿಗಳ ಕಛೇರಿ, ಜಿಲ್ಲಾ ಖಜಾನೆ, ಮಾಲಿನ್ಯ ನಿಯಂತ್ರಣ ಮಂಡಳಿ, ನಾಗಮಂಗಲ ಹೆಚ್ ಎಲ್ ಬಿ ಸಿ ಕಛೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆಡಳಿತ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ಪಡೆಯಲಿದೆ.