ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೇಕಾರ್ಡ್ ನಲ್ಲಿ ದಾಖಲೆ ಬರೆದ ವಿಕಲಚೇತನ ಸೋಮನಾಥ ಸಾಲಿಮಠ

ಬಳ್ಳಾರಿ, ಮಾ.26: ತಾಳ್ಮೆ ಮತ್ತು ಸತತ ಪ್ರಯತ್ನ ಇದ್ದರೆ ಸಾಧನೆಗೆ ಅಸಾಧ್ಯವೆನ್ನುವುದೇ ಇಲ್ಲ. ಈ ನಿಟ್ಟಿನಲ್ಲಿ ಬಳ್ಳಾರಿಯ ರೇಣುಕಾ ನಗರದ ನಿವಾಸಿ ಸೋಮನಾಥ ಸಾಲಿಮಠರ ಸಾಧನೆಯೇ ಸಾಕ್ಷಿಯಾಗಿದೆ.
ಬಾಗಲಕೋಟೆಯ ಜನಮನ ಪೌಂಡೇಷನ್ (ರಿ) ನವರ ಕರ್ನಾಟಕ ಅಚೀವರ್ಸ್ಸ್ ಬುಕ್ ಆಪ್ ರೇಕಾರ್ಡ್ ನಲ್ಲಿ ಇವರ ಹೆಸರನ್ನು ವಿಶ್ವದಾಖಲೆ ಮಾಡಿ ಗೌರವಿಸಿದ್ದಾರೆ.
ಹುಟ್ಟಿದ ವರ್ಷದೊಳಗೆ ಪೋಲಿಯೋ ರೋಗಕ್ಕೆ ತುತ್ತಾಗಿ ಎರಡೂ ಕಾಲುಗಳನ್ನು ಕಳೆದುಕೊಂಡರು. ವಿಕಲಚೇತನರಾದರೂ ದೃಢೀಗೆಡದೆ ಸ್ನಾತಕೋತ್ತರ ಪದವಿ ವಿಶೇಷ ಬಿಎಡ್ ಶಿಕ್ಷಣ ಪಡೆದು, ಜಿ.ಚೆಂಗಾರೆಡ್ಡಿ ಸ್ಮಾರಕ ಮಾನಸಿಕ ವಿಕಲಚೇತನ ಮಕ್ಕಳ ಶಾಲೆಯಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ವಿಶೇಷ ಪ್ರವೃತ್ತಿಯಾದ ನಾಣ್ಯ ಹಾಗೂ ಅಂಚೆ ಚೀಟಿಗಳು, ನೋಟುಗಳು, ಪೋಸ್ಟ್ ಕಾರ್ಡ್, ಕವಱ್ಸ್, ಮೊದಲಾದವುಗಳನ್ನು ಸಂಗ್ರಹ ಮಾಡಿ, ಅವುಗಳ ಬಗ್ಗೆ ವಿವರವಾದ ಮಾಹಿತಿ ಕಲೆಹಾಕಿ, ಬರೆದು, ಅಚ್ಚುಕಟ್ಟಾದ ಚೌಕಟ್ಟಿನಲ್ಲಿ ಸುಂದರವಾಗಿ ಹೊಂದಿಸಿ ಅನೇಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಂಶೋಧಕರಿಗೆ, ಇತಿಹಾಸ ಅಧ್ಯಾಯನಕಾರರಿಗೆ ಪ್ರದರ್ಶನದ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ. ಹಳೇಯ ನವೀನ ದೇಶ ವಿದೇಶ ನಾಣ್ಯ ಅಂಚೆ ಚೀಟಿಗಳು ಗಣ್ಯ ವ್ಯಕ್ತಿಗಳು ಸಾಧು ಸಂತರು ಮಾರ್ಗದರ್ಶಕರು, ಸ್ವಾತಂತ್ರ್ಯ ಹೋರಾಟಗಾರರು ಧೀಮಂತ ನಾಯಕರು, ಭಾರತೀಯ ಕಲೆ, ವಾಸ್ತುಶಿಲ್ಪ ಸಂಸ್ಕೃತಿ ಚಿತ್ರಿಸುವ ವಿಶೇಷ ಸಭ ಸಮಾರಂಭಗಳಲ್ಲಿ ಸರ್ಕಾರ ಬಿಡುಗಡೆಗೊಳಿಸಿದ ನಾಣ್ಯ ಹಾಗೂ ಅಂಚೆ ಚೀಟಿಗಳು ಕ್ರೀಡೆ ವಿಜ್ಞಾನ ಬಾಹ್ಯಾಕಾಶ ತಂತ್ರಜ್ಞಾನ ಕೃಷಿ, ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳು ವಸ್ತ್ರವಿನ್ಯಾಸ ಸಂವಿಧಾನ ಪ್ರಾಣಿ ಪಕ್ಷಿಗಳು ಸ್ವಾತಂತ್ರ್ಯ ಹೋರಾಟ ರಾಮಾಯಣ, ಮಹಾಭಾರತ ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಸುಮಾರು 2000ಕ್ಕೂ ಅಧಿಕ ಸಂಗ್ರಹಗಳ “ಖಜಾನವೇ ಇವರ ಹತ್ತಿರ ಇವೆ. ಅನೇಕ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದರ ಜೊತೆಗೆ ಸೋಮನಾಥರವರು ಉತ್ತಮ ಗಾಯಕರು, ಬರಹಗಾರರು, ನಿರೂಪಕರು ಆಗಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರ ಬಹುಮುಖ ಪ್ರತಿಭೆಯ ಸಾಧನೆ ಗುರ್ತಿಸಿ ಕರ್ನಾಟಕ ಸರ್ಕಾರ ಹಾಗೂ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.