ಕರ್ನಾಟಕದ ವೈಭವ, ಸಮೃದ್ಧಿ, ರಾಷ್ಟ್ರೀಯತೆ  ಪುನಃ ಸ್ಥಾಪಿಸುವ ಗುರಿ ಬಿಜೆಪಿಯದ್ದು

ದಾವಣಗೆರೆ.ಮೇ.೭: ಬಿಜೆಪಿಯು ರಾಜ್ಯದ ಪ್ರಗತಿಯ ಆಧಾರ ಸ್ತಂಭಗಳಾದ ಆರ್ಥಿಕ ಶಕ್ತಿ, ಸಾಮಾಜಿಕ ಒಗ್ಗಟ್ಟು, ಸಾಂಸ್ಕೃತಿಕ ಮತ್ತು ನಾಗರಿಕತೆಯ ಬೆಳವಣಿಗೆ, ಪ್ರಕೃತಿ ಮಾತೆಯ ರಕ್ಷಣೆ ಮತ್ತು ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳಂತೆಯೇ ಕರ್ನಾಟಕದ ವೈಭವ ಮತ್ತು ಸಮೃದ್ಧಿ, ರಾಷ್ಟ್ರೀಯತೆಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿ ಸ್ವಾಮಿ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರುನಾಡಿನಲ್ಲಿ ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿರುವ ಬಿಜೆಪಿಗೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಪ್ರಸ್ತುತಪಡಿಸುವುದು ಅತ್ಯಂತ ಗೌರವದ ವಿಷಯವಾಗಿದೆ ಎಂದು ಹೇಳಿದರು.ಚುನಾಯಿತ ಪ್ರತಿನಿಧಿಗಳು, ವಿಷಯ ತಜ್ಞರು, ಉದ್ಯಮದ ಪಾಲುದಾರರು ಮತ್ತು ಸಾರ್ವಜನಿಕರಿಂದ ಸಲಹೆಗಳೊಂದಿಗೆ ವಿವರವಾದ ಸಮಾಲೋಚನೆಯ ಮೂಲಕ ನಾವು ಸಮಾಜದ ಪ್ರತಿಯೊಂದು ವರ್ಗದ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವ 16 ಪ್ರಮುಖ ಭರವಸೆಗಳನ್ನು ಒಳಗೊಂಡಂತೆ 105 ಭರವಸೆಗಳನ್ನು ರೂಪಿಸಿದ್ದೇವೆ ಎಂದು ಮಾಹಿತಿ ನೀಡಿದರು.ಅನ್ನ,ಅಕ್ಷರ, ಆರೋಗ್ಯ, ಆದಾಯ, ಅಭಿವೃದ್ಧಿ ಮತ್ತು ಅಭಯ. ಈ ಭರವಸೆಗಳಲ್ಲಿ ಪ್ರಮುಖವಾದ 6 ಅಂಶಗಳ ಪ್ರಣಾಳಿಕೆಯ ಮೂಲಕ ಪ್ರತಿಯೊಬ್ಬ ಕನ್ನಡಿಗನನ್ನೂ ಈ ಅಮೃತ ಕಾಲದಲ್ಲಿ ನವ ಕರ್ನಾಟಕವನ್ನು ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಬಿಜೆಪಿ ಪಣ ತೊಟ್ಟಿದೆ ಎಂದು ತಿಳಿಸಿದರು.ಪ್ರತಿಯೊಬ್ಬ ವ್ಯಕ್ತಿಗೆ ಯೋಜನೆಗಳ ಫಲ ತಲುಪುತ್ತಿರುವುದನ್ನು ಖಚಿತ ಪಡಿಸಿಕೊಳ್ಳಲು ಬಿಜೆಪಿ ಸರ್ಕಾರವು ಸಬ್ ಕ ಸಾಥ್, ಸಬ್ ಕ ವಿಕಾಸ್ ತತ್ವವನ್ನು ಬದ್ದತೆಯಿಂದ ಅನುಸರಿಸುತ್ತಿದೆ. ಹಿಂದುಳಿದ ಮತ್ತು ಅರ್ಹ ಸಮುದಾಯಗಳಿಗೆ ಮೀಸಲಾತಿ ಪ್ರಯೋಜನಗಳ ಹೆಚ್ಚಳ ಮಾಡಲಾಗಿದೆ. ಪರಿವರ್ತನಾ ಶೀಲ ಆರ್ಥಿಕ ಬೆಳವಣಿಗೆ ಜೊತೆ ರಾಜ್ಯದ ಎಲ್ಲಾ ವರ್ಗದ ಜನರ ಜೀವನ ಮಟ್ಟವನ್ನು ಸುಧಾರಣೆ ಮಾಡಿದೆ ಎಂದು ಹೇಳಿದರು.2019ರಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ ಆರ್ಥಿಕತೆ, ಸಮಾನ ಅವಕಾಶ, ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಿದೆ. ರಾಜ್ಯದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಿ, ನಿರುದ್ಯೋಗ ದರವನ್ನು ಕಡಿಮೆ ಮಾಡಿದೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ವಕ್ತಾರ ಡಿ.ಎಸ್. ಶಿವಶಂಕರ್, ಮಾಧ್ಯಮ ಸಂಚಾಲಕರಾದ ಹೆಚ್.ಪಿ.ವಿಶ್ವಾಸ್, ನರೇಶ್ ಹೊರಟ್ಟಿ, ನವೀನ್ ಗುಬ್ಬಿ ಇದ್ದರು.