
ಕಲಬುರಗಿ,ಫೆ.25: ಕರ್ನಾಟಕದ ಎಲ್ಲ ಕಡೆಗಳಲ್ಲಿಯೂ ಫಿಲಂ ಹಬ್ಬಗಳು ಜರುಗಬೇಕು ಎಂದು ರೆಬೆಲ್‍ಸ್ಟಾರ್ ಅಂಬರೀಷ್ ಅವರ ಅಳಿಯ ನಟ ಅಭಿಷೇಕ್ ಅವರು ಹೇಳಿದರು.
ನಗರದ ರಂಗಾಯಣದ ಸಭಾಂಗಣದಲ್ಲಿ ಆರನೇ ವರ್ಷದ ಕಲಬುರ್ಗಿ ಅಂತರ್ರಾಷ್ಟ್ರೀಯ ಫಿಲಂ ಪೆಸ್ಟಿವಲ್ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರಕ್ಕೆ ಇದೇ ಮೊದಲ ಬಾರಿಗೆ ಬಂದಿರುವೆ. ಕಲ್ಯಾಣ ಕರ್ನಾಟಕದಲ್ಲಿಯೂ ಆರು ಬಾರಿ ಸಿನೆಮಾ ಹಬ್ಬ ನಡೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಗುರು ಶಿಷ್ಯರು ಚಲನಚಿತ್ರ ನಿರ್ದೇಶಕ ಜಡೇಶಕುಮಾರ್ ಹಂಪಿ ಅವರು ಮಾತನಾಡಿ, ಈ ಭಾಗದ ಪ್ರತಿಭೆಗಳು ಚಲನಚಿತ್ರ ಕ್ಷೇತ್ರದ ಅನುಭವ ಪಡೆದುಕೊಂಡು ನಂತರ ಇಲ್ಲಿಯ ಕಥೆಗಳನ್ನು ಚಲನಚಿತ್ರ ಮಾಡುವ ಮೂಲಕ ತವರೂರಿಗೆ ಕಾಣಿಕೆ ಕೊಡಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಮಾತನಾಡಿ, ಜಾಗತಿಕ ಆಲೋಚನೆ, ಸ್ಥಳೀಯ ಮಟ್ಟದ ಅನುಷ್ಠಾನ, ನೋಡಿ ಕಲಿ, ಮಾಡಿ ಕಲಿ ಎಂಬುದು ಚಿತ್ರ ಜಗತ್ತನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಸಿನೇಮಾ ಭಾಷೆಯನ್ನು ಅಧ್ಯಯನ ಮಾಡಿಕೊಳ್ಳಬೇಕು. ಆನಂತರವೇ ಸಿನೇಮಾ ಜಗತ್ತಿಗಿಳಿಯಬೇಕು ಎಂದರು.
ರಂಗಾಯಣದ ನಿರ್ದೇಶಕ ಪ್ರಭಾಕರ್ ಜೋಶಿ ಅವರು ಮಾತನಾಡಿ, ಪ್ರತಿಭೆ ನಮ್ಮೊಳಗಿರುತ್ತದೆ. ತರಬೇತಿ ಕೊಡುವ ಸಂಸ್ಥೆಗಳಿಂದ ಸಾಣೆ ಹಿಡಿಯಲಾಗುತ್ತದೆ. ಪ್ರತಿಭಾವಂತರು ನಮ್ಮ ನೆಲದಲ್ಲಿ ಅನೇಕರಿದ್ದಾರೆ ಎಂದರು. ವೇದಿಕೆಯ ಮೇಲೆ ಕ್ಯಾಮೆರಾಮೆನ್ ಸುಧಾಕರ್ ಶೆಟ್ಟಿ, ಚಿತ್ರರಂಗದ ಚಿತ್ರಕಥೆ ಲೇಖಕ ರಾಮಕೃಷ್ಣ, ನಟ ಅವಿನಾಶ್ ಹೊಯ್ಸಳ್, ನಿರ್ದೇಶಕ ರಾಮಾಚಾರಿ, ವಿಶಾಲ್ ಗಡಾಳೆ ಮುಂತಾದವರು ಉಪಸ್ಥಿತರಿದ್ದರು.
ಎರಡು ದಿನಗಳ ಹಬ್ಬದಲ್ಲಿ 223 ಸಿನೇಮಾಗಳು ಬಂದಿದ್ದು, ಅದರಲ್ಲಿ 15 ಸಿನೇಮಾಗಳು ಪ್ರದರ್ಶನಗೊಂಡವು. ಚಿತ್ರ ಜಗತ್ತಿನ ಹಲವು ವಿಷಯಗಳ ಕುರಿತು ಚರ್ಚೆಯಾದವು. ವೈಭವ್ ಕೇಸ್ಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು.