ಕರ್ನಾಟಕದಿಂದ ತರಕಾರಿ, ಹಣ್ಣು, ಮೀನು ಹೇರಿಕೊಂಡು ಬರುವ ವಾಹನಗಳು ಗಡಿಗಳಲ್ಲಿ ಸರಕು ಹಸ್ತಾಂತರಿಸಬೇಕು : ಜಿಲ್ಲಾಧಿಕಾರಿ

ಕಾಸರಗೋಡು, ಜು ೨೩- ತರಕಾರಿ, ಹಣ್ಣು, ಮೀನು ಇತ್ಯಾದಿಗಳನ್ನು ಹೇರಿಕೊಂಡು ಬರುವ ವಾಹನಗಳು ಗಡಿಪ್ರದೇಶಗಳಲ್ಲಿ ಸರಕನ್ನು ಸಂಬಂಧಪಟ್ಟ ಇತರ ವಾಹನಗಳಿಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾಽಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.

ಆರೋಗ್ಯ ಇಲಾಖೆಯ ಸುರಕ್ಷಾ ನಿಬಂಧನೆಗಳನ್ನು ಪಾಲಿಸಿ, ಗ್ಲೌಸ್, ಮಾಸ್ಕ್, ಸಾನಿಟೈಸರ್ ಇತ್ಯಾದಿ ಬಳಸಿ ನಂತರವಷ್ಟೇ ಸರಕನ್ನು ಹಸ್ತಾಂತರಿಸಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಕೇಸು ದಾಖಲಿಸಿ, ವಾಹನ ವಶಪಡಿಸಲಾಗುವುದು ಎಂದವರು ನುಡಿದರು.

ಸರಕು ಹೇರಿಕೊಂಡು ಕರ್ನಾಟಕದಿಂದ ಆಗಮಿಸುವ ಮಂದಿಗೆ ಕಾಸರಗೋಡು ಜಿಲ್ಲೆಗೆ ಪ್ರವೇಶಾತಿ ನೀಡುವುದಿಲ್ಲ. ಜಿಲ್ಲೆಯ ಗಡಿಯಲ್ಲಿ ತರಕಾರಿ ವಾಹನಗಳಿಂದ ಇತರ ವಾಹನಗಳಿಗೆ ಸರಕು ಹೇರಿಕೆ ನಡೆಸಿದ ನಂತರ, ಮೊದಲ ವಾಹನಗಳ ಚಾಲಕರು, ಇತರ ಸಿಬ್ಬಂದಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಜರಾಗಿ, ವಾರಕ್ಕೊಮ್ಮೆ ತಪಾಸಣೆಗೊಳಪಟ್ಟು, ಕೋವಿಡ್ ಲಕ್ಷಣ ಹೊಂದಿಲ್ಲ ಎಂಬ ಸರ್ಟಿಫಿಕೆಟ್ ಪಡೆಯಬೇಕು ಎಂದವರು ನುಡಿದರು.