
ಭಾಲ್ಕಿ:ನ.4: ಜಗತ್ತಿನ ಏಳ್ಗೆ ಕನಾಟಕದಿಂದಲೇ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಪ್ರೊ| ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ತಾಲೂಕಿನ ಭಾತಂಬ್ರಾ ಗ್ರಾಮದ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ಸಂಭ್ರಮ 50 ನಿಮಿತ್ಯ ಆಯೋಜಿಸಿದ್ದ ವಿಶೇಷ ವಿಶೇಷ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ವಿಷೇಶ ಉಪನ್ಯಾಸ ಮಂಡಿಸಿದ ಅವರು, ನಮ್ಮ ಹಿರಿಯ ಸಾಹಿತ್ತಿಗಳ ಪ್ರಕಾರ ಜಗತ್ತಿನ ಏಳ್ಗೆ ಆಗಬೇಕಿದ್ದರೆ ಅದು ಕರ್ನಾಟಕದಿಂದಲೇ ಸಾಧ್ಯ ಎನ್ನುವುದು. ಸದ್ಯದಲ್ಲಿ ಹಲವಾರು ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ಅದಕ್ಕೆ ಕನ್ನಡ ಪದ, ಕನ್ನಡದ ವಚನ ಸಾಹಿತ್ಯ, ದಾಸ ಸಾಹಿತ್ಯ ಸೇರಿದಂತೆ ಕನ್ನಡದ ನುಡಿ ಕಂಪು ಈ ಎಲ್ಲಾ ಯುದ್ಧಗಳನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಮಾತ್ರ ಜಗತ್ತಿನ ಏಳ್ಗೆ ಆಗುವುದು. ಹೊರತಾಗಿ ಮತ್ಯಾವುದರಿಂದಲೂ ಸಾಧ್ಯವಿಲ್ಲ. ಪಂಪನ ಮಹಾಕಾವ್ಯ, ಬಸವಣ್ಣನವರ, ಅಕ್ಕಮಹಾದೇವಿಯ ವಚನಗಳು, ದಿನನಿತ್ಯದ ಬದುಕಿಗೆ ಉಪಯುಕ್ತವಾಗಿವೆ. ನಾಡು, ನುಡಿ ಭಾಷೆಗಳಬಗ್ಗೆ ಗೌರವವಿಟ್ಟು ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಶರಣಪ್ಪ ರಾಚೋಟೆ, ಕನ್ನಡ ಭಾಷೆ ನಮ್ಮದು ಎನ್ನುವ ಅಭಿಮಾನ ಬರುವವರೆಗೆ ಕನ್ನಡದ ಏಳ್ಗೆ ಸಾಧ್ಯವಿಲ್ಲ. ಕನ್ನಡಿಗರಾದ ನಮ್ಮಲ್ಲಿ ಭಾಷಾಭಿಮಾನ ಬೆಳೆಯಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಜಗದ್ಗುರು ನಿರಂಜನ ಸಂಸ್ಥಾನ ಮಠದ ಶ್ರೀ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು, ಗಡಿ ಭಾಗದಲ್ಲಿ ಕನ್ನಡ ಗಟ್ಟಿ ಗೊಳಿಸಬೇಕಿದೆ. ಅದಕ್ಕಾಗಿ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡದಿ ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಕನ್ನಡಿಗರಾದ ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ ಎನ್ನುವ ಶಪಥ ತೆಗೆದುಕೊಳ್ಳಬೇಕು. ಕನ್ನಡಿಗರು ನೀರಿನಂತಿದ್ದೇವೆ, ನೀರು ಯಾವ ಪಾತ್ರೆಯಲ್ಲಿ ಹಾಕಿದರೆ ಆ ಪಾತ್ರೆಯ ಆಕಾರ ಪಡೆದುಕೊಳ್ಳುತ್ತದೆ. ಹಾಗೆ ಕನ್ನಡಿಗಾರದ ನಾವು ಯಾವಭಾಷೆಯ ಜನ ನಮ್ಮನ್ನು ಸಂಪರ್ಕಿಸುತ್ತಾರೆಯೋ ಅವರ ಭಾಷೆಯಲ್ಲಿ ನಾವು ಮಾತನಾಡುತ್ತೇವೆ. ಇದು ನಮ್ಮ ದೌರ್ಭಾಗ್ಯ. ಹೀಗಾಗಿ ಇಂದಿನಿಂದಲೇ ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ ಎನ್ನುವ ಶಪಥ ಸ್ವೀಕರಿಸೋಣ ಎಂದು ಹೇಳಿದರು.
ಬೆಂಗಳೂರಿನ ಕಸಾಪ ಮಹಿಳಾ ಪ್ರತಿನಿಧಿ ಪ್ರೊ| ಮಲ್ಲಮ್ಮಾ ಆರ್ ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‍ಗೆ ಹೆಚ್ಚಿನ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ನಾಡೋಜ ಮಹೇಶ ಜೋಷಿಯವರ ಕೋಟಿ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಉಪಾಧ್ಯಕ್ಷ ಅಶೋಕ ಬಾವುಗೆ, ಕಾಶಿನಾಥ ಲದ್ದೆ, ಕಸಾಪ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ, ಜಯರಾಜ ದಾಬಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ, ಐಜಿಕ ಬಂಗಾರೆ, ಜಿಪ್ಸನ್ ಕೋಟೆ, ಗುಂಡಪ್ಪ ಬೆಲ್ಲಾಳೆ, ಸುಭಾಷ ದಾಡಗೆ, ಶ್ರೀಕಾಂತ ಭೊರಾಳೆ, ಮಹಾದೇವ ಬೇಲೂರೆ, ಗಣಪತಿ ಭೂರೆ, ಬಸವರಾಜ ಮಡಿವಾಳೆ, ಶಿವಶರಣಪ್ಪ ಹಣಮಶೆಟ್ಟಿ ಉಪಸ್ಥಿತರಿದ್ದರು.
ನ್ಯಾಯವಾದಿ ಮಹೇಶ ರಾಚೋಟೆ ಸ್ವಾಗತಿಸಿದರು. ಶಿಕ್ಷಕಿ ಸರೋಜಿನಿ ಕನಶೆಟ್ಟಿ ನಿರೂಪಿಸಿದರು. ಮಹಾದೇವ ಬೇಲೂರೆ ವಂದಿಸಿದರು.