ಕರ್ನಾಟಕಕ್ಕೆ ನಾವು ಕೆಆರ್‍ಎಸ್ ದ್ವಿಚಕ್ರವಾಹನ ಜಾಥಾ

ಕಲಬುರಗಿ:ಫೆ.24: ಕರ್ನಾಟಕಕ್ಕೆ ನಾವು ಎಂಬ ಹೆಸರಿನಲ್ಲಿ ರಾಜ್ಯಾಧ್ಯಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಆರಂಭಗೊಂಡಿರುವ ದ್ವಿಚಕ್ರವಾಹನ ಜಾಥಾ ಫೆಬ್ರವರಿ 26ರಂದು ಜಿಲ್ಲೆಯ ಕಮಲಾಪುರ ಮೂಲಕ ನಗರಕ್ಕೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಜಾಧವ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಕಮಲಾಪುರಕ್ಕೆ ಆಗಮಿಸುವ ಜಾಥಾ ನಗರದಲ್ಲಿ ಮಧ್ಯಾಹ್ನ 1 ಗಂಟೆಗೆ ವೇದಿಕೆ ಕಾರ್ಯಕ್ರಮ ನೆರವೇರಲಿದೆ. ಉಳಿದ ಪಟ್ಟಣಗಳಲ್ಲಿಯೂ ಸಹ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ. ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಕೋರಿದರು.
ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ಕೋರಲು ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಳೆದ 19ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭಗೊಂಡ ಜಾಥಾ ಮಾರ್ಚ್ 2ರವರೆಗೆ ಇಡೀ ರಾಜ್ಯಾದ್ಯಂತ ಸಂಚರಿಸಲಿದೆ. 29 ಜಿಲ್ಲಾ ಕೇಂದ್ರಗಳು, ಐವತ್ತಕ್ಕಿಂತ ಹೆಚ್ಚು ತಾಲ್ಲೂಕು ಕೇಂದ್ರಗಳು ಸೇರಿದಂತೆ 82 ಪಟ್ಟಣ, ನಗರಗಳಲ್ಲಿ ಸಾರ್ವಜನಿಕ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 2ರಂದು ಶನಿವಾರ ನೆಲಮಂಗಲದಲ್ಲಿ ಬೃಹತ್ ಸಮಾವೇಶ ಜರುಗಲಿದೆ ಎಂದು ಅವರು ತಿಳಿಸಿದರು.
ಪಕ್ಷವು ಈ ಹಿಂದೆ 2021ರ ಆಗಸ್ಟ್, ಸೆಪ್ಟೆಂಬರ್‍ನಲ್ಲಿ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಭ್ರಷ್ಟರೇ ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ, ನಾಡಪ್ರೇಮಿಗಳೇ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದ್ದ 32 ದಿನಗಳ ಕಾಲ 3500 ಕಿ.ಮೀ.ಗಳ ದ್ವಿಚಕ್ರವಾಹನ ಜಾಥಾ ಪಕ್ಷವನ್ನು ರಾಜ್ಯದ ಜನರಿಗೆ ಪರಿಚಯಿಸಿದೆ. ರಾಜ್ಯದ 63 ತಾಲ್ಲೂಕು ಕಚೇರಿಗಳಲ್ಲಿ ಲಂಚ ಮುಕ್ತ ಅಭಿಯಾನಾ ಹಮ್ಮಿಕೊಂಡು ಜನರಿಗೆ ಹತ್ತಿರವಾಗಿದೆ. ಜಾಥಾದಿಂದ ಸಾವಿರಾರು ಜನರು ಸದಸ್ಯತ್ವ ಪಡೆದರು. ನೂರಾರು ಜನರು ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಹಣ, ಹೆಂಡ ಹಂಚದೇ ಜಾತಿ, ಕೋಮುಗಳ ಅನೈತಿಕ ರಾಜಕಾರಣ ಮಾಡದೇ ಪಕ್ಷವು 195 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಸರ್ಕಾರಿ ಅಧಿಕಾರಿಗಳ ಲಂಚಗುಳಿತನ, ಭ್ರಷ್ಟಾಚಾರ, ಪೋಲಿಸರ ದುರ್ವರ್ತನೆ ಮತ್ತು ದೌರ್ಜನ್ಯ, ನ್ಯಾಯ ಬೆಲೆಅಂಗಡಿಗಳಲ್ಲಿ ಬಡವರಿಗೆ ಆಗುವ ವಂಚನೆ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕರ್ತವ್ಯಲೋಪದ ವಿಚಾರ ಬಂದಾಗ ರಾಜ್ಯದ ಜನರಿಗೆ ಪಕ್ಷವೇ ನೆನಪಾಗುತ್ತದೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಏಕೈಕ ಆಶಾಕಿರಣ ಪಕ್ಷವಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದರು.
ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದ ದ್ವಿಚಕ್ರವಾಹನ ಜಾಥಾವು ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ್, ಬೆಂಗಳೂರು ನಗರ ಜಿಲ್ಲೆಯ ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಮಂಗಳೂರು, ಉಡುಪಿ, ಕಾರವಾರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ್, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ್, ತುಮಕೂರು ಮಾರ್ಗವಾಗಿ ಚಲಿಸಿ ಮಾರ್ಚ್ 2ರಂದು ನೆಲಮಂಗಲ ತಲುಪಿ ಬೃಹತ್ ಸಮಾವೇಶ ಜರುಗಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲ್ಲಪ್ಪ ಡೆಂಗೆ, ರಾಜು ಸ್ವಾಮಿ, ಸಿದ್ದಾರ್ಥ ಮಿಸೆ, ಅನಿಲ್ ಗಾಜರೆ, ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು.