ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಬಿಜೆಪಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ:ಫೆ.12: ಅನುದಾನ, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಸೋಮವಾರ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ಸಂಸದರಿಗೆ ಮನವಿ ಪತ್ರವನ್ನು ಸಲ್ಲಿಸಿ, ಜಿಎಸ್‍ಟಿ, ತೆರಿಗೆ ಹಣ, ಬರ ಪರಿಹಾರ ಸೇರಿದಂತೆ ವಿವಿಧ ಅನುದಾನಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಸಗುತ್ತಿರುವ ಅನ್ಯಾಯ ಮತ್ತು ತಾರತಮ್ಯ ನೀತಿ ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತ, ಸಂವಿಧಾನದ ಆಶಯದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ದೇಶದ ಜನತೆಯ ಪರವಾಗಿ ಆಡಳಿತವನ್ನು ಮಾಡಬೇಕು. ದೇಶ ಮುನ್ನಡೆಸಲು ಹಾಗೂ ರಾಜ್ಯಗಳನ್ನು ಸರ್ವ ವ್ಯಾಪಿಯಾಗಿ ಸಬಲಗೊಳಿಸಲು ಭಾರತದ ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯಗಳ ಮೂಲಕ ಸಂಗ್ರಹವಾಗಿರುವ ವಸ್ತುಗಳು, ಆಸ್ತಿಗಳು, ವಾಹನಗಳು ಇತ್ಯಾದಿ ಮೇಲಿನ ತೆರಿಗೆ, ಸೆಸ್, ಸರ್ಚಾರ್ಜ್ ರೂಪದಲ್ಲಿ ಸಂಗ್ರಹಿಸುವ ತೆರಿಗೆ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕು ಎಂದು ಹಣಕಾಸು ಆಯೋಗವನ್ನು ರಚಿಸಲಾಗಿದೆ. ಅದರಂತೆ ತೆರಿಗೆ ಹಣವನ್ನು ನ್ಯಾಯ ಸಮ್ಮತವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಿ ಅಗತ್ಯವಾದ ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆಗೊಳಿಸುವುದ ಭಾರತ ಸರ್ಕಾರದ ಹೊಣೆಯಾಗಿದೆ ಎಂದು ಅವರು ಹೇಳಿದರು.
ಆದಾಗ್ಯೂ, ಕಳೆದ ನಾಲ್ಕು ವರ್ಷಗಳಿಂದ ರಾಜ್ಯಗಳಿಗೆ ಲಭಿಸಬೇಕಾದ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದು, ಸುಮಾರು 45,000 ಕೋಟಿ ರೂ.ಗಳು ನಷ್ಟವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಇದರೊಂದಿಗೆ ಬರ ಪರಿಹಾರ ಅನುದಾನವನ್ನೂ ಸಹ ಬಿಡುಗಡೆಗೊಳಿಸದೇ ಇರುವುದು ರಾಜ್ಯಕ್ಕೆ ಮಾಡಿದ ಮಹಾ ಅನ್ಯಾಯವಾಗಿದೆ ಎಂದು ಅವರು ಕೇಂದ್ರದ ವಿರುದ್ಧ ಹರಿಹಾಯ್ದರು.
ರಾಜ್ಯದ ಪಾಲಿನ ಹಣ ಸೇರಿದಂತೆ ನೆಲ, ಜಲ, ಭಾಷೆಯಂತಹ ರಾಜ್ಯದ ಅಸ್ಮೀತೆಯ ಪ್ರಶ್ನೆಗಳು ಎದುರಾದಾಗ ರಾಜ್ಯದ ಪರ ಪರ ಧ್ವನಿ ಎತ್ತದೇ ಮೌನ ತಾಳಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿರುವ ನಿಧಿ ಅಥವಾ ಅನುದಾನ ಎಷ್ಟು ಕ್ಷೇತ್ರಗಳಿಗೆ ಸಂಸದರ ನಿಧಿಯಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷದ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ್ ರಾಠೋಡ್, ಸಹ ಕಾರ್ಯದರ್ಶಿ ಕಾ. ಪದ್ಮಾವತಿ ಎನ್. ಮಾಲಿಪಾಟೀಲ್, ಭೀಮಾಶಂಕರ್ ಮಾಡಿಯಾಳ್, ಪ್ರಭುದೇವ್ ಯಳಸಂಗಿ, ಎಚ್.ಎಸ್. ಪತಕಿ, ಶಿವಲಿಂಗಮ್ಮಾ ಲೆಂಗಟಿಕರ್, ಶಾಣಮ್ಮಾ ಎ. ಪೂಜಾರಿ ಮುಂತಾದವರು ಪಾಲ್ಗೊಂಡಿದ್ದರು.