ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.03:- ಗಾಂಧಿ ಜಯಂತಿ ಹಿನ್ನೆಲೆ ಮಹಾತ್ಮ ಸಾರಿದ ಸಂದೇಶವನ್ನು ಸಾರಿ ಕಾವೇರಿಗಾಗಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಗಾಂಧಿ ಚಿತ್ರ ಹಿಡಿದುರಸ್ತೆತಡೆ ನಡೆಸಿ ಕಿವಿ, ಕಣ್ಣು, ಬಾಯಿಯನ್ನು ಮುಚ್ಚಿಕೊಂಡು ಮೌನ ಪ್ರತಿಭಟನೆ ನಡೆಸಿದರು.
ಅಹಿಂಸೆ ಮೂಲಕ ಮಹಾತ್ಮಗಾಂಧಿ ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟರು. ಅದರಂತೆ, ಗಾಂಧಿ ಜಯಂತಿ ದಿನದಂದು ಜೀವನದಿ ಕಾವೇರಿಗಾಗಿಇಂದು ನಾವು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ. ಕರ್ನಾಟಕಕ್ಕೆ ಕೆಟ್ಟದ್ದಾಗುವುದನ್ನು ನಾವು ನೋಡುವುದಿಲ್ಲ, ಕೇಳುವುದಿಲ್ಲ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಿ ರಾಜ್ಯದಜನರಿಗೆ ಸರ್ಕಾರ ಒಳ್ಳೆಯ ಸಂದೇಶ ಸಾರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನೆಡೆಸಿದ್ದರಿಂದ ಅರ್ಧತಾಸು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.