ಕರ್ನಾಟಕಕ್ಕೆ ಅನ್ಯಾಯವೆಸಗಿದ ಮೋದಿಗೆ ಜನ ಚೊಂಬು ನೀಡಲಿದ್ದಾರೆ: ಸುರ್ಜೆವಾಲಾ

ಬೀದರ್: ಏ.29:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಎನ್.ಎ ಹೇಗಿದೆ ಅಂದ್ರೆ, ಕರ್ನಾಟಕಕ್ಕೆ ವಿರೋಧ ಮಾಡುವುದೇ ಅವರ ಡಿ.ಎನ್.ಎ.ದಲ್ಲಿದೆ ಎಂದು ಕರ್ನಾಟಕ ಕಾಂಗ್ರೇಸ್ ಚುನಾವಣಾ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಕರ್ನಾಟಕದ ಆರೂವರೆ ಕೋಟಿ ಜನರಿಗೆ ನರೇಂದ್ರ ಮೋದಿಯವರು ಸೇಡು ತೀರಿಸಿಕೊಳ್ಳುತಿದ್ದಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ರವಿವಾರ ಹಾಗೂ ಸೋಮವಾರ ಮೋದಿಯವರು ಕರ್ನಾಟಕದ ಚುನಾವಣಾ ಪ್ರಚಾರದಲ್ಲಿದ್ದಾರೆ. ಆದರೆ ಎಲ್ಲಾ ಕಡೆಗಳಲ್ಲೂ ಜನರು “ಗೋ ಬ್ಯಾಕ್ ಮೋದಿ” ಎಂದು ಘೋಷಣೆ ಕೂಗುತಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿಯಾಗಿದೆ. ಇವರಿಂದ ರೈತರಿಗೆ ಅಪಾರವಾದ ಹಾನಿಯಾಗಿದೆ. 14 ಸಾವಿರದ 718 ಕೋಟಿ ರಾಜ್ಯದ ಪಾಲಿನ ತೆರಿಗೆ ಹಣ ಮೋದಿ ಸರ್ಕಾರ ನೀಡಲಿಲ್ಲ ಎಂದು ಸುರ್ಜೆವಾಲಾ ಆರೋಪಿಸಿದರು.
ರಾಜ್ಯದಿಂದ ನೂರು ರೂಪಾಯಿ ಕೊಟ್ಟರೆ 13. ರೂಪಾಯಿ ತೆರಿಗೆ ಹಣ ವಾಪಸ್ ಕೊಡುತ್ತಾರೆ. 19 ರೂಪಾಯಿ ಬರ ಪರಿಹಾರ ಕೊಡುತ್ತಾರೆ. ಇದು ಯಾವ ನ್ಯಾಯ? ಎಂದರು.
ಇದು ಕರ್ನಾಟಕದ ಜನತೆಯ ಜೊತೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಮೋದಿಯವರು ಕರ್ನಾಟಕಕ್ಕೆ ಖಾಲಿ ಚಂಬು ನೀಡಿದ್ದಾರೆ. ಹೀಗಾಗಿ ಕರ್ನಾಟಕದ ಮತದಾರರು ಈ ಬಾರಿ ನೋದಿಯವರಿಗೆ ಖಾಲಿ ಚಂಬು ನೀಡಲಿದ್ದಾರೆ ಎಂದರು.
ಇದೇ ವೇಳೆ ರಣದೀಪಸಿಂಗ್ ಸುರ್ಜೆವಾಲಾ ಮತ್ತು ಸಚಿವ ಈಶ್ವರ ಖಂಡ್ರೆ ಖಾಲಿ ಚಂಬು ಪ್ರದರ್ಶಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ, ಮಾಜಿ ಶಾಸಕ ಅಶೋಕ ಖೇಣಿ, ಪೌರಾಡಳಿತ ಸಚಿವ ರಹಿಂಖಾನ್, ಲೋಕಸಭೆ ಅಭ್ಯರ್ಥಿ ಸಾಗರ ಖಂಡ್ರೆ, ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಂ.ಎಲ್.ಸಿ ಅರವಿಂದ ಕುಮಾರ ಅರಳಿ, ಭೀಮರಾವ ಪಾಟೀಲ, ಮಾಜಿ .ಎಮ್.ಎಲ್..ಸಿ ವಿಜಯಸಿಂಗ್, ಮುಖಂಡರಾದ ಸುಭಾಷ್ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.