ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತ’ ಅನಾವರಣ

ದಾವಣಗೆರೆ, ಜು.24; ನಗರದ ರಿಂಗ್ ರಸ್ತೆಯಲ್ಲಿ ಇದುವರೆಗೂ ಕ್ಲಾಕ್ ಸರ್ಕಲ್ ಎಂದು ಹೆಸರಿಸುತ್ತಿದ್ದ ವೃತ್ತಕ್ಕೆ ‘ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತ’ ಎಂದು ನಾಮಕರಣ ಮಾಡುವ ಮೂಲಕ ಕಾರ್ಗಿಲ್ ವಿಜಯದ ರೂವಾರಿ ರವೀಂದ್ರನಾಥ ಅವರ ಹೆಸರನ್ನು ದಾವಣಗೆರೆ ಮಹಾನಗರ ಪಾಲಿಕೆ ಅಮರವಾಗಿಸಿದೆ.ಇದರಿಂದ ಕಾರ್ಗಿಲ್ ಯುದ್ಧದ ವೇಳೆ ದೇಶಕ್ಕೆ ಪಾಕ್ ಸೇನೆ ವಿರುದ್ಧ ಮೊದಲ ಜಯ ದೊರಕಿಸಿದ ಖ್ಯಾತಿ ಹೊಂದಿರುವ ಕರ್ನಲ್ ರವೀಂದ್ರನಾಥ್ ಅವರ ಹೆಸರನ್ನು ನಗರದ ವೃತ್ತವೊಂದಕ್ಕೆ ಕರ್ನಲ್ ಎಂ.ಬಿ. ರವೀಂದ್ರನಾಥ ಅವರ ಹೆಸರಿಡಬೇಕೆನ್ನುವ ನಿವೃತ್ತ ಸೈನಿಕರು, ಕರ್ನಲ್ ಕುಟುಂಬ ಹಾಗೂ ಅಭಿಮಾನಿಗಳ ಬಹುದಿನದ ಬೇಡಿಕೆ  ಈಡೇರಿದೆ.ರಿಂಗ್ ರಸ್ತೆಯ ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಸ್ಮಾರಕ ಉದ್ಯಾನವನದ ಬಳಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ. ರವೀಂದ್ರನಾಥ್, ನಾಮಫಲಕ ಅನಾವರಣದ ಮೂಲಕ ವೃತ್ತಕ್ಕೆ ಕರ್ನಲ್ ರವೀಂದ್ರನಾಥ್ ಅವರ ಹೆಸರಿಡುವ ಸಮಾರಂಭಕ್ಕೆ ಚಾಲನೆ ನೀಡಿದರು.ಸಂಸದ ಸಿದ್ದೇಶ್ವರ ಮಾತನಾಡಿ, ಕಾರ್ಗಿಲ್ ವಿಜಯ ದಿನದ ಹೊಸ್ತಿಲಲ್ಲೇ ಈ ಶುಭ ಕಾರ್ಯ ನೆರವೇರಿರುವುದು ಅರ್ಥಪೂರ್ಣ. ಈ ಮೂಲಕ ಕಾರ್ಗಿಲ್ ವಿಜಯದ ರೂವಾರಿ ಹೆಸರು ಅಮರವಾಗಿದೆ ಎಂದರು.ಈ ವೇಳೆ ಹಾಜರಿದ್ದ ಕರ್ನಲ್ ಕುಟುಂಬದ ರಾಜೇಂದ್ರ, ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತದ ನಿರ್ವಹಣೆಯ ಹೊಣೆಯನ್ನು ತಮ್ಮ ಕುಟುಂಬವೇ ವಹಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಆಯುಕ್ತರು ಸಮ್ಮತಿಸಿದರು.ಮೇಯರ್ ಜಯಮ್ಮ ಗೋಪಿನಾಯ್ಕ, ಉಪ ಮೇಯರ್ ಗಾಯತ್ರಿ ಬಾಯಿ, ಧೂಡ ಅಧ್ಯಕ್ಷ ಕೆ.ಎಂ. ಸುರೇಶ್, ಆಯುಕ್ತ ವಿಶ್ವನಾಥ ಮುದ್ದಜ್ಜಿ ಮಾಜಿ ಮೇಯರ್ ಎಸ್.ಟಿ. ವೀರೇಶ್, ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್, ಸದಸ್ಯರಾದ ರೇಖಾ ಸುರೇಶ್, ಎ. ನಾಗರಾಜ್, ಪ್ರಸನ್ನ ಕುಮಾರ್, ಕೆ.ಎಂ. ವೀರೇಶ್, ರಾಜನಹಳ್ಳಿ ಶಿವಕುಮಾರ್, ನಿವೃತ್ತ ಸೈನಿಕರ ಸಂಘದ ಸತ್ಯಪ್ರಕಾಶ್ ಇತರರು ಉಪಸ್ಥಿತರಿದ್ದರು.