ಕರ್ತವ್ಯ ಬದ್ಧತೆಯಿಂದ ಸೇವೆ ಸಲ್ಲಿಸಿದರೆ ವೃತ್ತಿಯ ಸಾರ್ಥಕತೆ

ಕಲಬುರಗಿ.ಜೂ.2:ಸರ್ಕಾರಿ ನೌಕರಿ ಪಡೆಯುವುದು, ದೀರ್ಘ ಕಾಲ ನೌಕರಿ ಮಾಡುವುದೇ ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸಿದರೆ ಅಂತಹ ಸೇವೆ, ವೃತ್ತಿ ನಿಜಕ್ಕೂ ಸಾರ್ಥಕತೆ ಪಡೆಯಲು ಸಾಧ್ಯವಿದೆಯೆಂದು ನಿವೃತ್ತ ಮುಖ್ಯ ಶಿಕ್ಷಕ ಚನ್ನಮಲ್ಲಪ್ಪ ಎಚ್.ಪಾಟೀಲ ಹೇಳಿದರು.

 ಆಳಂದ ತಾಲ್ಲೂಕಿನ ಮುನ್ನಳ್ಳಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸರಳವಾಗಿ ತಮಗೆ ಹಮ್ಮಿಕೊಂಡಿದ್ದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. 

ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿ ಅಡಗಿರುವುದರಿಂದ, ಶಿಕ್ಷಕರು ಎಂದಿಗೂ ಕೂಡಾ ಕರ್ತವ್ಯ ಬದ್ಧತಯಿಂದ ವಿಮುಖರಾಗಬಾರದು.  ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ, ತಮ್ಮ ಸ್ವಂತ ಮಕ್ಕಳಂತೆ ಭಾವಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರೆ, ವಿದ್ಯಾರ್ಥಿಗಳ ಭವಿಷ್ಯ ಖಂಡಿತವಾಗಿಯೂ ಉಜ್ವಲವಾಗುತ್ತದೆ. ಜೊತೆಗೆ ನಮಗೆ ಕೂಡಾ ಸೇವೆಯ ಬಗ್ಗೆ ಆತ್ಮತೃಪ್ತಿ ಇರುತ್ತದೆ. ಅಂತಹ ಸೇವೆ ನಮ್ಮದಾಗಲಿಯೆಂದು ಆಶಿಸಿದರು. 

ತಾಲ್ಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನರಸಪ್ಪ ದೇಗಾಂವ ಬಿರಾದಾರ ಮಾತನಾಡಿ, ಚನ್ನಮಲ್ಲಪ್ಪ ಎಚ್.ಪಾಟೀಲ ಅವರು ದಕ್ಷ, ಪ್ರಾಮಾಣಿಕತೆ, ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ.  ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕ ವೃಂದ, ಪಾಲಕ-ಪೋಷಕ ವರ್ಗ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಶ್ರಮಿಸಿದ್ದಾರೆ. ಈ ಶಾಲೆಯು 450ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ್ದು, ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲದೆ ಉತ್ತಮ ಗುಣಮಟ್ಟದೊಂದಿಗೆ ಭೋದನೆ, ಕಲಿಕೆಯಾಗುವ ಮೂಲಕ ತಾಲ್ಲೂಕಿಗೆ ಮಾದರಿಯಾಗಲು ಅವರ ಶ್ರಮ, ಸಮರ್ಪಣಾ ಮನೋಭಾವ ಪ್ರಮುಖವಾಗಿದೆಯೆಂದರು. 

 ಪ್ರಮುಖರಾದ ಎಚ್.ಬಿ.ಪಾಟೀಲ,  ನೀಲಕಂಠಯ್ಯ ಹಿರೇಮಠ, ಬಸಯ್ಯ ಸ್ವಾಮಿ ಹೊದಲೂರು, ದೇವೆಂದ್ರಪ್ಪ ಗಣಮುಖಿ,  ಅಂಬಾರಾಯ ಕುಂಬಾರ, ಜಗದೇವಿ ಸಿ, ಪಾಟೀಲ, ಗುರುಶಾಂತ ಸಿ. ಪಾಟೀಲ, ಸುರೇಖಾ ಬಿ. ಪಾಟೀಲ ಇದ್ದರು.