ಕರ್ತವ್ಯ ನಿರ್ವಹಣೆಯಲ್ಲಿ ಬ್ಲಾಕ್‌ಮೇಲ್‌ಗೆ ಹೆದರದಿರಿ-ನಾರಾಯಣ್

ಕೋಲಾರ, ಜ.೨೦- ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಗೆ ಯಾವುದೇ ಒತ್ತಡ, ಬ್ಲಾಕ್‌ಮೆಲ್ ನಡೆಸುವ ಪ್ರಯತ್ನ ನಡೆದರೆ ತಮ್ಮ ಗಮನಕ್ಕೆ ತಂದರೆ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಂಡು ನಿಮ್ಮ ನೆರವಿಗೆ ನಿಲ್ಲುವುದಾಗಿಯೂ ಯಾವುದೇ ಭಯ, ಆತಂಕವಿಲ್ಲದ ವಾತಾವರಣದಲ್ಲಿ ನೀವು ಕರ್ತವ್ಯ ನಿರ್ವಹಿಸಲು ಅಗತ್ಯ ಸಹಕಾರ ನೀಡುವುದಾಗಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಭರವಸೆ ನೀಡಿದರು.
ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಅವರನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ನೀಡಿದ ಆತ್ಮೀಯ ಸನ್ಮಾನ ಸ್ವಾಗತ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ನೌಕರರ ಜನರ ಸೇವಕರು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಹೊಣೆ ಇದೆ, ಇದನ್ನು ಅರಿತು ನೀವು ಜನರ ಕೆಲಸವನ್ನು ನಿಯಮಾನುಸಾರ ಇದ್ದರೆ ಕೂಡಲೇ ಮಾಡಿಕೊಡಿ, ಅನಗತ್ಯ ವಿಳಂಬ ಮಾಡದಿರಿ ಎಂದು ಕಿವಿಮಾತು ಹೇಳಿಮ ರಚನಾತ್ಮಕ ಚಟುವಟಿಕೆಗಳಿಗೆ ನನ್ನನ್ನು ಕರೆಯಿರಿ ಸದಾ ನಿಮ್ಮೊಂದಿಗೆ ಇರುವೆ ಎಂದರು.
ನಿಮ್ಮ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಗೆ ಯಾವುದೇ ಶಕ್ತಿ, ಸಂಘಟನೆ ಅಡ್ಡಿಪಡಿಸಿದ್ದೆ ಆದಲ್ಲಿ ಕೂಡಲೇ ನನ್ನ ಗಮನಕ್ಕೆ ತನ್ನಿ ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಪೊಲೀಸ್ ಇಲಾಖೆಗೆ ಗೊತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ಜನರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆಯೊಂದಿಗೆ ಸರ್ಕಾರಿ ನೌಕರರು ಸಹಕಾರ ನೀಡಿ, ಜನರಿಗೆ ನೆಮ್ಮದಿ ನೀಡುವ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸೋಣ, ಸಮಾಜ ವಿದ್ರೋಹಿ ಶಕ್ತಿಗಳು ಮಿಸುಕಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗಿದೆ, ಸಾಕಷ್ಟು ಹುದ್ದೆಗಳು ಖಾಲಿ ಇದೆ, ಇದರ ನಡುವೆಯೂ ನಾವುಕೆಲಸ ಮಾಡುತ್ತಿದ್ದು, ಕೆಲವು ಸಂದರ್ಭದಲ್ಲಿ ಒತ್ತಡ, ಬ್ಲಾಕ್ ಮೇಲ್ ತಂತ್ರಕ್ಕೆ ಒಳಗಾಗುತ್ತಿದ್ದೇವೆ, ಇದರ ನಿವಾರಣೆಗೆ ಪೊಲೀಸ್ ಇಲಾಖೆ ಸಹಕಾರ ಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್,ರಾಜ್ಯಪರಿಷತ್ ಸದಸ್ಯ ಗೌತಮ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಹಾಲಿ ಉಪಾಧ್ಯಕ್ಷರಾದ ಪುರುಷೋತ್ತಮ್, ಮಂಜುನಾಥ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ವೆಂಕಟಾಚಲಪತಿಗೌಡ,ಎಸ್ಪಿಯವರ ಆಪ್ತಸಹಾಯಕ ನಾಗರಾಜ್, ಅಂಕಿ ಅಂಶಗಳ ಇಲಾಖೆ ರವಿ, ವಾರ್ತಾ ಇಲಾಖೆಯ ನಟರಾಜಾಚಾರಿ ಮತ್ತಿತರರು ಉಪಸ್ಥಿತರಿದ್ದರು.