ಕರ್ತವ್ಯಲೋಪ ರಮೇಶ್‌ರಾಥೋಡ್ ಅಮಾನತು

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಏ.೧೬:ಕರ್ತವ್ಯಲೋಪ ಆರೋಪದಡಿ ಎಫ್‌ಎಸ್‌ಟಿ ತಂಡದ ಅಧಿಕಾರಿ ರಮೇಶ್.ಜಿ ರಾಥೋಡ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಚಂದ್ರಶೇಖರ್‌ನಾಯಕ್ ಆದೇಶಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನಿಗಾವಹಿಸಲು ರಚನೆ ಮಾಡಿದ್ದ ಎಸ್‌ಟಿಎಫ್ ತಂಡಕ್ಕೆ ರಮೇಶ್ ರಾಥೋಡ್ ಅವರನ್ನು ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿತ್ತು.ರಮೇಶ್ ರಾಥೋಡ್ ಅವರು ಲಿಂಗಸುಗೂರಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಮುದಗಲ್ ಹೋಬಳಿ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ನಿರ್ವಹಣೆಗಾಗಿ ನಿಗಾ ವಹಿಸಲು ರಚಿಸಿದ್ದ ಎಫ್‌ಎಸ್‌ಟಿ ತಂಡದ ಅಧಿಕಾರಿಯನ್ನಾಗಿ ರಾಥೋಡ್ ಅವರನ್ನು ನೇಮಕ ಮಾಡಲಾಗಿತ್ತು.
ಆದರೆ, ಕರ್ತವ್ಯಕ್ಕೆ ರಾಥೋಡ್ ಅವರು ಗೈರಾಗುವ ಮೂಲಕ ಕರ್ತವ್ಯಲೋಪವೆಸಗಿದ್ದಾರೆ ಹಾಗೂ ತಮ್ಮ ಪರವಾಗಿ ಕಾರ್ಯನಿರ್ವಹಿಸಲು ಅನಧಿಕೃತವಾಗಿ ಮತ್ತೊಬ್ಬ ವ್ಯಕ್ತಿಯನ್ನು ನಿಯೋಜಿಸಿದ್ದಾರೆಂದು ಸಂಘಟನೆಯೊಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾಧಿಕಾರಿ ಚಂದ್ರಶೇಖರ್‌ನಾಯಕ್ ಅವರು ರಮೇಶ್‌ರಾಥೋಡ್ ಅವರು ಕರ್ತವ್ಯಕ್ಕೆ ಗೈರಾಗಿರುವುದನ್ನು ಖಚಿತಪಡಿಸಿಕೊಂಡು ಅಮಾನತುಗೊಳಿಸಿ ಆದೇಶಿಸಿದ್ದಾರೆ ಹಾಗೂ ನಿಮ್ಮ ವಿರುದ್ಧ ಏಕೆ ಕಾನೂನುಕ್ರಮ ಕೈಗೊಳ್ಳಬಾರದು ಎನ್ನುವ ಕುರಿತು ೨೪ಗಂಟೆಯೊಳಗೆ ಖುದ್ದು ಹಾಜರಾಗಿ ಸಮಜಾಯಿಷಿ ನೀಡುವಂತೆ ಸೂಚಿಸಲಾಗಿತ್ತು.
ರಮೇಶ್ ರಾಥೋಡ್ ಅವರು ಮೇಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಚುನಾವಣಾ ಕರ್ತವ್ಯಕ್ಕೆ ಗೈರಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿನ ನಿಷ್ಕಾಳಜಿ, ಬೇಜವಾಬ್ದಾರಿ ಸಾಬೀತಾದ ಹಿನ್ನೆಲೆ ಅಧಿಕಾರಿ ರಮೇಶ್‌ರಾಥೋಡ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶಿಸಿದ್ದಾರೆ.