
ಕಲಬುರಗಿ,ಏ.30: ಸರ್ಕಾರಿ ನೌಕರಿ ಪಡೆಯುವುದು, ದೀರ್ಘಕಾಲ ನೌಕರಿ ಮಾಡುವುದೇ ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ಅಂತಹ ಸೇವೆ ನಿಜಕ್ಕೂ ಸಾರ್ಥಕತೆ, ಆತ್ಮತೃಪ್ತಿ ಪಡೆಯಲು ಸಾಧ್ಯವಿದೆ ಎಂದು ಕ.ರಾ.ಪ್ರಾ.ಶಾ.ಶಿ.ಸಂಘದ ಆಳಂದ ತಾಲೂಕಾ ಘಟಕದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಹೊದಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಎಸ್.ಕಾಮಶೆಟ್ಟಿ ಅವರ ಸೇವಾ ವಯೋನಿವೃತ್ತಿ ಪ್ರಯುಕ್ತ ದಂಪತಿಗೆ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಯೋನಿವೃತ್ತಿ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಬಸವರಾಜ ಎಸ್.ಕಾಮಶೆಟ್ಟಿ, ನಾನು 30 ವರ್ಷಗಳ ಕಾಲ ಸರ್ಕಾರಿ ಕರ್ತವ್ಯವನ್ನು ಸಲ್ಲಿಸಿದ್ದು ನನಗೆ ತೃಪ್ತಿ ತಂದಿದೆ. ಕರ್ತವ್ಯದ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲಾಗಿದೆ. ವೃತ್ತಿಯಿಂದ ನಿವೃತ್ತಿಯಾಗಿದ್ದೇನೆ. ಆದರೆ ಸಮಾಜ ಸೇವೆಯ ಪ್ರವೃತ್ತಿಯಿಂದಲ್ಲ. ನನ್ನ ಮಾತೃ ಶಿಕ್ಷಣ ಇಲಾಖೆಯ ನೂರಾರು ಜನ ಶಿಕ್ಷಕ ಬಳಗ ಹೊಂದಿದ್ದು, ಅವರೆಲ್ಲರ ಜೊತೆ ಮುಂದೆಯೂ ಕೂಡಾ ಉತ್ತಮ ಒಡನಾಟ ಹೊಂದಲಿದ್ದು, ಶೈಕ್ಷಣಿಕ ಪ್ರಗತಿಯಲ್ಲಿ ಭಾಗವಹಿಸುವೆ ಎಂದರು.
ಕಾರ್ಯಕ್ರಮದಲ್ಲಿ ನಾಗವೇಣಿ ಬಿ.ಕಾಮಶೆಟ್ಟಿ, ಸಿದ್ದರಾಮ ಪಾಟೀಲ, ರಮೇಶ ಸಕ್ಕರಗಿ, ನೀಲಕಂಠಯ್ಯ ಹಿರೇಮಠ, ವೀರೇಶ ಬೋಳಶೆಟ್ಟಿ ನರೋಣಾ, ರಾಜಕುಮಾರ ಬಟಗೇರಿ, ಅಣ್ಣಾರಾಯ ಎಚ್.ಮಂಗಾಣೆ, ಲೋಕಪ್ಪ ಜಾಧವ, ಶಾಂತಪ್ಪ ಜಕ್ಕಾಣಿ, ಮಲ್ಲಿಕಾರ್ಜುನ ಮಲಶೆಟ್ಟಿ, ಮಂಜುನಾಥ ರೆಡ್ಡಿ, ಮಲ್ಲಿಕಾರ್ಜುನ ಹೊಸಮನಿ, ಶಿವಲಿಂಗಪ್ಪ, ಬಸವರಾಜ ರೋಳೆ, ನಾಗೇಂದ್ರಪ್ಪ ಗಾಡೆ, ಪ್ರಕಾಶ ಕೊಟ್ರೆ ಸೇರಿದಂತೆ ಇನ್ನಿತರರಿದ್ದರು.