ಕರ್ತವ್ಯದಲ್ಲಿ ಸೋಮಾರಿತನ ಸಲ್ಲದು:ಶಾಹಾಬಾದಕರ್

ಬೀದರ:ಎ.7:2020-21ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ನೇಮಕಗೊಂಡ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು.ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಖಡಕ ಎಚ್ಚರಿಕೆ ನೀಡಿದರು.
ಇಲ್ಲಿನ ಆರ್.ಆರ್.ಕೆ.ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ,ಪ್ರಥಮ ಪಿಯು ಅರ್ಧವಾರ್ಷಿಕ ಹಾಗೂ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆ ಕುರಿತು ಮಂಗಳವಾರ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಪ್ರೀಲ್ 28ರಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಆರಂಭಗೊಳ್ಳಲಿವೆ.ಪರೀಕ್ಷಾ ವೇಳಾಪಟ್ಟಿನುಸಾರ ಆಯಾ ವಿಷಯದ ಉಪನ್ಯಾಸಕರು ಕೋವಿಡ್-19 ಮಾರ್ಗಸೂಚಿನುಸಾರ ಪ್ರಾಯೋಗಿಕ ಪರೀಕ್ಷೆಗಳು ನಡೆಸಬೇಕು.ಅನುದಾನರಹಿತ ಕಾಲೇಜಿನವರು ಮಕ್ಕಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.ಈ ವಿಷಯದಲ್ಲಿ ಇಲಾಖೆ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಹಣಮಂತರಾವ ಮೈಲಾರಿ ಮಾತನಾಡಿ,ಅನುದಾನಿತ ಕಾಲೇಜಿನವರು ಉಪನ್ಯಾಸಕರ ಕೊರತೆಯಿಂದ ಫಲಿತಾಂಶ ಕುಸಿಯದಂತೆ ಎಚ್ಚರವಹಿಸಬೇಕು.ಸರ್ಕಾರ ಅನುದಾನಿತ ಕಾಲೇಜುಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ವಿಠಲದಾಸ ಪ್ಯಾಗೆ ಮಾತನಾಡಿ,ಪಿಯು ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ ಜಿಲ್ಲೆಗೆ ಏಕಮಾದರಿ ಪರೀಕ್ಷೆ ನಡೆಸಬೇಕು ಎನ್ನುವ ಸದುದ್ದೇಶದಿಂದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಬೇಡಿಕೆ ತಖ್ತೆ: ಜಿಲ್ಲೆಯ ಎಲ್ಲ ಕಾಲೇಜಿನವರು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದರು.
ಕ್ಯಾಪ್ಸುಲ್ ಬಿಡುಗಡೆ:ಇದೇ ಸಂದರ್ಭದಲ್ಲಿ ಪಿಯು ಫಲಿತಾಂಶ ವೃದ್ಧಿಸಲು ಪೂರಕವಾಗಿರುವ ಕಲಾ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಎಲ್ಲ ವಿಷಯಗಳ ಕ್ಯಾಪ್ಸುಲ್‍ಗಳನ್ನು ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಬಿಡುಗಡೆಗೊಳಿಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಉಪಾಧ್ಯಕ್ಷರಾದ ವಿಜಯಕುಮಾರ,ಪ್ರಭು ಎಸ್.,ಚಂದ್ರಕಾಂತ ಗಂಗಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಚಾರ್ಯರು ಸಭೆಯಲ್ಲಿ ಭಾಗವಹಿಸಿದ್ದರು.ಪ್ರಭಾರಿ ಪ್ರಾಚಾರ್ಯ ಶಿವರಾಜ ಬಡಿಗೇರ ಸ್ವಾಗತಿಸಿದರು.ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು.ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾರ ಸೂರ್ಯವಂಶಿ ವಂದಿಸಿದರು.