ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರಿಗೆ ಸವದಿ ಅಭಿನಂದನೆ

ಬೆಂಗಳೂರು, ಏ.21-ಸರ್ಕಾರದ ಮನವಿಗೆ ಓಗುಟ್ಟು ಇಂದು ಸಂಜೆಯ ವೇಳೆಗೆ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಸುಮಾರು 13 ಸಾವಿರದಷ್ಟು ಬಸ್ಸುಗಳು ಸಂಚರಿಸಿರುವುದರಿಂದ ಸಾರ್ವಜನಿಕರು ಸಮಾಧಾನ ಪಡುವಂತಾಗಿದ್ದು ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಾರಿಗೆ ನೌಕರರು ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಸುಮಾರು 13 ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿ ಕೋವಿಡ್‍ನಂತಹ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾರಿಗೆ ಸೇವೆ ಲಭ್ಯವಾಗಿ ನಿಟ್ಟುಸಿರು ಬಿಡುವಂತಾಗಿದ್ದು ಕರ್ತವ್ಯ ಪ್ರಜ್ಞೆ ಮೆರೆದವರಿಗೆ ಅಭಿನಂದನೆಗಳನ್ನು ಅವರು ಸಲ್ಲಿಸಿದ್ದಾರೆ.
ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕೆಂದು ಖಾಸಗಿ ವಾಹನ ಮಾಲೀಕರಲ್ಲಿ ಕೋರಿಕೊಂಡಾಗ ಅವರೂ ಸಹ ತುಂಬು ಹೃದಯದಿಂದ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾಳೆಯಿಂದ ಸಾರಿಗೆ ನೌಕರ ಬಾಂಧವರ ಸಹಕಾರದಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣಪ್ರಮಾಣದಲ್ಲಿ ಸುಗಮಗೊಳ್ಳುತ್ತದೆ ಎಂಬ ವಿಶ್ವಾಸ ಮೂಡುವಂತಾಗಿರುವುದು ಸಂತೋಷದ ಸಂಗತಿಯಾಗಿದೆ.
ಮುಷ್ಕರದ ಸಂದರ್ಭದಲ್ಲಿಯೂ ಹಲವು ಮಂದಿ ಸಾರಿಗೆ ನೌಕರರು ಸರ್ಕಾರದ ಮನವಿಗೆ ಸ್ಪಂದಿಸಿ ಕರ್ತವ್ಯಪ್ರಜ್ಞೆ ಮೆರೆದು ಸಾರ್ವಜನಿಕರಿಗೆ ಈ ಸಂಕಷ್ಟದ ಕಾಲದಲ್ಲಿಯೂ ಸೇವೆ ಒದಗಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ.
ಇಂತಹವರ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವತ್ತ ನಮ್ಮ ಸರ್ಕಾರ ಯಾವತ್ತೂ ಸಹಾನುಭೂತಿ ಹೊಂದಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ನಷ್ಟ:
ಸಾರಿಗೆ ನೌಕರರ ಮುಷ್ಕರದಿಂದ ಸಂಸ್ಥೆಗೆ 287 ಕೋಟಿ ಸಾರಿಗೆ ನಷ್ಟ ಸಂಭವಿಸಿದೆ.