
ಅಥಣಿ : ಮಾ.19:ಸರ್ಕಾರಿ ಹುದ್ದೆಯಲ್ಲಿದ್ದು, ಕರ್ತವ್ಯಕ್ಕೆ ಹಾಜರಾಗದೆ ಜನಪ್ರತಿನಿಧಿಗಳೊಂದಿಗೆ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಇಲಾಖೆಯ ನೌಕರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೌಕರ ಭೀಮನಗೌಡ ಪಾಟೀಲ ತನ್ನ ಕರ್ತವ್ಯಕ್ಕೆ ಹಾಜರಾಗದೆ ಕಳೆದ ಸೋಮವಾರ ದಿ.13 ರಂದು ಜನಪ್ರತಿನಿಧಿಗಳೊಂದಿಗೆ ರಸ್ತೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವತಃ ತಾನೇ ಗುದ್ದಲಿ ಪೂಜೆ ನೆರವೇರಿಸುತ್ತಿರುವ ದೃಶ್ಯದ ವಿಡಿಯೋ ಹಾಗೂ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಕೂಡ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ನೌಕರ ತನ್ನ ಆರೋಗ್ಯ ಇಲಾಖೆಗೆ ಸಂಬಂಧಿಸದೇ ಇರುವ ಹಾಗೂ ತಾನು ಕರ್ತವ್ಯ ನಿರ್ವಹಿಸುವ ಕಾರ್ಯಕ್ಷೇತ್ರದ ವ್ಯಾಪ್ತಿಯ ಹೊರಗಡೆ ಹೋಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ ಸಕಾಲಕ್ಕೆ ಹಾಜರಾಗದೆ ಇರುವ ಆರೋಪಗಳು ಕೂಡ ಕೇಳಿಬಂದಿವೆ. ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ ದಬಾಡಿ ಮತ್ತು ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ, ಅಪರ್ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ. ಅವರ ತನಿಕಾ ವರದಿ ಬಂದ ನಂತರ ಶಿಸ್ತು ಕ್ರಮ ಕೈಕೊಳ್ಳಲಾಗುವುದು.
— ಭೋಯಾರ್ ಹರ್ಷಲ್ ನಾರಾಯಣರಾವ್
ಸಿಇಓ ಜಿ. ಪಂ. ಬೆಳಗಾವಿ
” ತನಿಖೆ ಆರಂಭಿಸಿದ್ದೇವೆ, ನಮ್ಮ ತನಿಖೆ ಮುಗಿದ ನಂತರ ಶಿಸ್ತಿನ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುವುದು.
- ಎಸ್ ಎಸ್ ಗಡಾದೆ, ಅಪರ ಜಿಲ್ಲಾ ಆರೋಗ್ಯ ಅಧಿಕಾರಿಗಳು ಚಿಕ್ಕೋಡಿ.