ಕರೋನಾ 2ನೇ ಅಲೆಯ ಜಾಗೃತಿ ಮೂಡಿಸಲು ಸಲಹೆ

ಕೋಲಾರ,ಏ. ೨೨: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ-ಸಮಾರಂಭ, ಮದುವೆ ಮೊದಲಾದ ಆಚರಣೆಗಳಿಗಾಗಿ
ಸರ್ಕಾರದ ಹೊಸ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಕರೋನಾ ಸೋಂಕಿತರಿಗೆ ಧೈರ್ಯ ತುಂಬಿ ಸಾರ್ವಜನಿಕರಿಗೆ ಕರೋನಾ ೨ನೇ ಅಲೆಯ ಬಗ್ಗೆ ಜಾಗೃತಿ ಮೂಡಿಸಿ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಂಗಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ಕೋವಿಡ್-೧೯ ವೈರಾಣು ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಹೋಬಳಿ ಕೇಂದ್ರ ಸ್ಥಾನಗಳಲ್ಲಿ ಆಂಬುಲೆನ್ಸ್ ಸೇವೆ ಶೀಘ್ರವಾಗಿ ಸಾರ್ವಜನಿಕರಿಗೆಸಿಗುವಂತಾಗಬೇಕು. ಎಲ್ಲಾ ಆಂಬುಲೆನ್ಸ್‌ಗಳಲ್ಲಿ ಜಿ.ಪಿ.ಎಸ್ ವ್ಯವಸ್ಥೆ ಹೊಂದಿರಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕರೋನಾ ರೋಗಿಗಳ ಜೊತೆ ನಾವು ನಡೆದುಕೊಳ್ಳುವ ರೀತಿ ಉತ್ತಮವಾಗಿರಬೇಕು. ಜನರೇ ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆಯುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಮೇಶ್‌ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಡವರು, ನಿರ್ಗತಿಕರು ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಖಾಸಗಿಆಸ್ಪತ್ರೆಯಲ್ಲಿ ಸೂಕ್ತ ರೀತಿಯ ಚಿಕಿತ್ಸೆ ಸಿಗುವಂತಾಗಬೇಕು. ರೆಮ್ಡಿಸಿವಿಯರ್ ಲಸಿಕೆ ಅವಶ್ಯಕವಾಗಿ ಬೇಕಾಗಿರುವ ಕರೋನಾ ಸೋಂಕಿತರಿಗೆ ಸಿಗುವಂತಾಗಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳಾದ ಡಾ. ಆರ್.ಸೆಲ್ವಮಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಇಂದಿನಿಂದ ಸರ್ಕಾರದ ಮಾನದಂಡದಂತೆ ನೈಟ್ ಕಫ್ರ್ಯೂ ಮತ್ತು ವೀಕೆಂಡ್ ಕಫ್ರ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಅಂತರಾಜ್ಯ ಗಡಿ ಭಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಲಾಗುವುದು. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್‌ಗಳ, ಆ?ಯಕ್ಸಿಜನ್ ವ್ಯವಸ್ಥೆ, ಐ.ಸಿ.ಯು ಬೆಡ್‌ಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಎ ಸಿಮ್ಟಮ್ಯಾಟಿಕ್ ಇರುವವರಿಗೆ ಕರೋನಾ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ನೀಡುವುದಕ್ಕೆ
ಸೂಚಿಸಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಕರೋನಾ ಟೆಸ್ಟಿಂಗ್‌ಗಳ ಸಂಖ್ಯೆ ಹೆಚ್ಚಿಸುವಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯಲ್ಲಿ ಇದುವರೆಗೂ ೧,೭೦,೦೦೦ ಜನರು ಲಸಿಕೆ ಪಡೆದಿದ್ದಾರೆ..ಸಾರ್ವಜನಿಕರು ಸರ್ಕಾರದ ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ನಾಗೇಶ್, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ವಿಧಾನಸಭಾ ಕ್ಷೇತ್ರದ ಶಾಶಕರಾದ ಕೆ.ವೈ.ನಂಜೇಗೌಡ, ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್, ಅಪರ ಜಿಲ್ಲಾಧಿಕಾರಿಗಳಾದ ಡಾ. ಸ್ನೇಹಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಎಸ್.ಎನ್.ವಿಜಯಕುಮಾರ್, ಜಿಲ್ಲಾಶಸ್ತ್ರಚಿಕಿತ್ಸಕರಾದ ನಾರಾಯಣಸ್ವಾಮಿ, ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ.ಚಾರಿಣಿ, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್, ಎಲ್ಲಾ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ
ಮತ್ತಿತ್ತರರು ಉಪಸ್ಥಿತರಿದ್ದರು.