ಕರೋನಾ ಸಂದರ್ಭದಲ್ಲಿ ಅಸ್ತಮಾದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿ

ಕಲಬುರಗಿ:ಮೇ.4: ಸತತವಾದ ಕೆಮ್ಮು, ದಮ್ಮು, ಮೂಗು ಸೋರುವಿಕೆ, ಉಸಿರಾಟದ ಸಮಯದಲ್ಲಿ ತೊಂದರೆ, ಮೂಗು ಸೋರುವಿಕೆ, ಸೀನು, ಮೂಗಿನ ಹೊಳ್ಳೆಗಳಲ್ಲಿ ಊತ, ಎದೆ ಕಟ್ಟುವುದು, ಗಂಟಲು ಕೆರೆತ, ಹೆಚ್ಚಿನ ಪ್ರಮಾಣದ ಕಫ, ಉಸಿರಾಡುವಾಗ ಸೀಟೆ ಹೊಡೆದಂತೆ ಸದ್ದಾಗುವಂತಹ ಲಕ್ಷಣಗಳು ಅಸ್ತಮಾ ರೋಗವಾಗಿದೆ. ಪ್ರಸ್ತುತ ಕರೋನಾದ ಸಂದರ್ಭದಲ್ಲಿ ಇದರ ಉಲ್ಬಣ ಹೆಚ್ಚಾಗಿದ್ದು, ಅದರ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.

    ನಗರದ ಶೇಖರೋಜಾದಲ್ಲಿರುವ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು' ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ' ಇವುಗಳ ಸಹಯೋಗದೊಂದಿಗೆ ಮಂಗಳವಾರ ಸರಳವಾಗಿ ಜರುಗಿದ 'ವಿಶ್ವ ಅಸ್ತಮಾ ದಿನಾಚರಣೆ'ಯಲ್ಲಿ ಅವರು ಮಾತನಾಡುತ್ತಿದ್ದರು.

  ಭಾರತದಲ್ಲಿ ಪ್ರತಿ ಹತ್ತು ಜನರಿಗೆ ಒಬ್ಬರಿಗಾದರೂ ಅಸ್ತಮಾ ರೋಗವಿದೆ. ಶೇ.60ರಷ್ಟು ಪ್ರಮಾಣದಲ್ಲಿ ಅಲರ್ಜಿಯಿಂದ ಇದು ಉಂಟಾಗುತ್ತದೆ. ಹೆಚ್ಚು ಸಮಯ ಧೂಳಿನಲ್ಲಿ ಸಂಚರಿಸುವರಿಗೆ ಹೆಚ್ಚು ಬಾಧಿಸುತ್ತದೆ. ಶ್ವಾಶನಾಳಕ್ಕೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಉಸಿರಾಟದ ತೊಂದರೆಯಾಗುತ್ತದೆ. ಇದಕ್ಕೆ ಅಸ್ತಮಾಘಾತ ಎನ್ನುತ್ತಾರೆ. ಅನಗತ್ಯವಾಗಿ ಆತಂಕಕ್ಕೆ ಈಡಾಗಬೇಡಿ. ವೈದ್ಯರ ಸಲಹೆಗಳನ್ನು ಪಾಲಿಸಿ. ತಾಜಾ ಆಹಾರವನ್ನು ಸೇವಿಸಿ. ಚನ್ನಾಗಿ ನಿದ್ರೆ ಮಾಡಿ. ವ್ಯಾಯಾಮ, ಯೋಗ, ಧ್ಯಾನ ಮಾಡಬೇಕು. ಎಣ್ಣೆಯಲ್ಲಿ ಹುರಿದ, ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಿಯೆಂದು ಅನೇಕ ಸಲಹೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮಂಗಲಾ ಚಂದಾಪುರೆ, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ನಾಗೇಶ್ವರಿ ಮುಗಳಿವಾಡಿ, ಜಗನಾಥ ಗುತ್ತೇದಾರ, ಲಕ್ಷ್ಮಿ ಕೊಂಗೆ, ಅರ್ಚನಾ ಸಿಂಗೆ, ಸುಲೋಚನಾ, ಸಂಗೀತಾ ಡಿ., ಶ್ರೀದೇವಿ, ನಾಗಮ್ಮ, ವಿಜುಬಾಯಿ, ನೀತಾ, ಸಂಗೀತಾ, ಸುಲೋಚನಾ, ಗೌರಮ್ಮ, ಮಕ್ಬೂಲ್ ನವಾಜ್, ಭಾಗ್ಯವಂತ ಜೋಶಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.