ಕರೋನಾ ಬಗ್ಗೆ ನಿರ್ಲಕ್ಷ್ಯ ಮಾಡದೆ ಮುಂಜಾಗ್ರತೆ ವಹಿಸಿ

ಕಲಬುರಗಿ:ಮಾ.28: ಕರೋನಾ ರೋಗವು ರಾಜ್ಯದಲ್ಲಿ ಇತ್ತೀಚಿಗೆ ರೂಪಾಂತರವಾಗಿ ಎರಡನೇ ಅಲೆಯ ರೂಪದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರ ಬಗ್ಗೆ ನಿರ್ಲಕ್ಷ್ಯವಹಿಸದೆ ಸ್ವಚ್ಛತೆಗೆ ಆದ್ಯತೆ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ವ್ಯಾಕ್ಸಿನ್ ಪಡೆಯುವಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಕರೋನಾ ನಿರ್ಮೂಲನೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಜೇವರ್ಗಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಅಂಬಾರಾಯ ತಂಗಾ ಸಲಹೆ ನೀಡಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ತಾಲ್ಲೂಕಾ ಆರೋಗ್ಯ ಇಲಾಖೆಯ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಆರೋಗ್ಯ ಶಿಕ್ಷಣ, ಕರೋನಾ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು.

   ಆರೋಗ್ಯ ಇಲಾಖೆಯ ವಿ.ಬಿ.ಡಿ ಮೇಲ್ವಿಚಾರಕ ಶರಣಯ್ಯ ಹಿರೇಮಠ ಮಾತನಾಡಿ, ಕೋವಿಡ್-19 ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಮತ್ತು ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ತೀರ್ವ ಜ್ವರ, ತಲೆನೋವು, ನೆಗಡಿ, ಒಣ ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಭೇದಿ ಈ ರೋಗದ ಪ್ರಮುಖ ಲಕ್ಷ್ಣಗಳಾಗಿವೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕಲಿದ್ದಾಗ, ಹಸ್ತ ಲಾಘವ, ವಸ್ತುಗಳನ್ನು ಬಳಿಸಿದಾಗ ರೋಗ ಹರಡುತ್ತದೆ. ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು, ರೋಗವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ, ಸಾರ್ವಜನಿಕ ಸ್ಥಳಗಳಲ್ಲಿ ಉಗಳಬೇಡಿಯೆಂದು ಹೇಳಿದರು.

   ಕೋವಿಡ್-19ಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಕ್ವಿಜ್‍ನಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ಮಾಳಣ್ಣ, ಸಚಿನ್, ಮುಸ್ಕಾನ್ ಅವರಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

   ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದಿನ್ ಸಾಗರ, ಹಿರಿಯ ಆರೋಗ್ಯ ಸಹಾಯಕ ಶ್ರೀಶೈಲ ಅರಳಗುಂಡಗಿ, ಲೆಕ್ಕಪತ್ರ ಸಹಾಯ ಪ್ರಹ್ಲಾದ ಪುಲೆ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ಶರಣಮ್ಮ ಭಾವಿಕಟ್ಟಿ. ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಸಿದ್ದಪ್ಪ ಪೂಜಾರಿ ಸೇರಿದಂತೆ ಇನ್ನಿತರರಿದ್ದರು.