ಕರೋನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

ಕಲಬುರಗಿ:ಏ.7: ಕರೋನಾ ರೋಗವು ರಾಜ್ಯದಲ್ಲಿ ಇತ್ತೀಚಿಗೆ ರೂಪಾಂತರವಾಗಿ ಎರಡನೇ ಅಲೆಯ ರೂಪದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರ ಬಗ್ಗೆ ನಿರ್ಲಕ್ಷ್ಯವಹಿಸದೆ ಸ್ವಚ್ಛತೆಗೆ ಆದ್ಯತೆ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯುವಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕರೋನಾ ನಿಯಂತ್ರಣ ಮತ್ತು ನಿರ್ಮಲನೆಗೆ ಆರೋಗ್ಯ ಇಲಾಖೆಯ ಜೊತೆಗ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆಯೆಂದು ನೂತನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಹೇಳಿದರು.
ಜಿಲ್ಲೆಯ ನೂತನ ಆರೋಗ್ಯಾಧಿಕಾರಿ ಅಧಿಕಾರ ವಹಿಸಿಕೊಂಡ ಪ್ರಯುಕ್ತ ತಮಗೆ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ನಗರದಲ್ಲಿ ಬುಧವಾರ ಏರ್ಪಡಿದ್ದ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಆರೋಗ್ಯ ಅಧಿಕಾರಿ ಹುದ್ದೆಗೆ ನಾನು ಲಾಬಿ ಮಾಡದೆ, ತಾನಾಗಿಯೇ ಒಲಿದು ಬಂದ ಹುದ್ದೆಯಾಗಿದೆ. ದೊರೆತ ಅವಕಾಶವನ್ನು ಅತ್ಯಂತ ಪ್ರಾಮಾಣಿಕ, ಶೃದ್ಧೆಯಿಂದ ಮಾಡುವ ಮೂಲಕ ಇಲಾಖೆಯ ಎಲ್ಲಾ ಸಿಬ್ಬಂದಿಯ ಸಹಕಾರದೊಂದಿಗೆ ಜಿಲ್ಲೆಯೆ ಆರೋಗ್ಯ ಇಲಾಖೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪಸರಿಸುವ ರೀತಿ ಮಾಡುವ ಧ್ಯೇಯ ನಮ್ಮದಾಗಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಮುತುವರ್ಜಿ ವಹಿಸಲಾಗುವುದು. ಸೂಕ್ತ ಫಲಾನುಭವಿಗೆ ಯೋಜನೆಯನ್ನು ಮುಟ್ಟಿಸುವಲ್ಲಿ ಪ್ರಾಮಾಣಿಕ ಕಾಳಜಿಯಾಗಿದೆ. ವಿಶೇಷವಾಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಶೀಘ್ರವಾಗಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಇಲಾಖೆ ಹಗಲು-ರಾತ್ರಿಯೆನ್ನದೆ ಶ್ರಮಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದೆಂದು ತಮ್ಮ ಯೋಜನೆ, ಕಾರ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ದೇವೇಂದ್ರಪ್ಪ ಗಣಮುಖಿ, ಅಂಬಾರಾಯ ತಂಗಾ ಸೇರಿದಂತೆ ಮತ್ತಿತರರಿದ್ದರು.