ಕರುಳ ಕುಡಿಯನ್ನೆ ಮಾರಿದ ತಾಯಿ

ಸೇಲಂ, ಏ.೧೪: ತಾಯಿಯೊಬ್ಬಳು ತನ್ನ ಏಳು ವರ್ಷದ ಮಗಳನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದಾಳೆ.
ಸೇಲಂ ಜಿಲ್ಲೆಯ ಸೀಲಾನೈಕನ್‌ಪಟ್ಟಿಯಲ್ಲಿ ಈ ಘಟನೆ ನಡೆದಿದೆ. ಸತೀಶ್ ಮತ್ತು ಆತನ ಪತ್ನಿ ಸುಮತಿಗೆ ಮೂವರು ಮಕ್ಕಳಿದ್ದಾರೆ. ೧೦ ಮತ್ತು ೭ ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗು ೬ ವರ್ಷದ ಒಬ್ಬ ಮಗನಿದ್ದಾನೆ. ಸತೀಶ್ ಮದ್ಯವ್ಯಸನಿ.
ಸೇಲಂನಲ್ಲಿ ಕೃಷ್ಣನ್ ಎಂಬ ಶ್ರೀಮಂತ ಉದ್ಯಮಿ ಮನೆಯಲ್ಲಿ ಸುಮತಿ ಕೆಲಸ ಮಾಡುತ್ತಿದ್ದಾಳೆ. ಕೆಲ ವರ್ಷಗಳಿಂದ ಪತಿಯಿಂದ ದೂರ ಉಳಿದ ಈಕೆ ಇದೀಗ ತನ್ನ ಎರಡನೇ ಮಗಳನ್ನು ೧೦ ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ.
ಈ ಸುದ್ದಿ ತಿಳಿದ ಸುಮತಿಯ ತಾಯಿ ಚಿನ್ನಾಪೊನ್ನು ಮಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಕೃಷ್ಣನ್ ಮನೆ ಪರಿಶೀಲಿಸಿದಾಗ ಬಾಲಕಿ ಆತನೊಂದಿಗೆ ವಾಸಿಸುತ್ತಿರುವುದು ಗೊತ್ತಾಗಿದೆ.
ಬಾಲಕಿಯನ್ನು ರಕ್ಷಿಸಿದ ಪೊಲೀಸರು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ವಶಕ್ಕೆ ನೀಡಿದರು. ಈ ವೇಳೆ ಮೊಮ್ಮಗಳನ್ನು ತನ್ನ ಸುಪರ್ದಿಗೆ ನೀಡಬೇಕೆಂದು ಚಿನ್ನ ಪೊನ್ನು ಪೊಲೀಸರಿಗೆ ಮನವಿ ಮಾಡಿದ್ದಾರೆ. ಸುಮತಿಯನ್ನು ಬಂಧಿಸಲಾಗಿದ್ದು, ಕೃಷ್ಣನ್ ಬಗ್ಗೆ ಶೋಧ ನಡೆಯುತ್ತಿದೆ.