ಕರುಣಾನಿಧಿ ಸಾವು: ಸ್ಟಾಲಿನ್ ವಿರುದ್ಧ ಲಿಂಗಮ್ ಆರೋಪ

ಚೆನ್ನೈ, ಮಾ.೨೩- ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ, ಆರೋಪ-ಪ್ರತ್ಯಾರೋಪಗಳ ಸುರಿಮಳೆಗಳು ನಡೆದಿವೆ.

ಡಿಎಂಕೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಾಯಕ ರಾಮಲಿಂಗಮ್ ಅವರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸಾವಿನ ಹಿಂದೆ ಹಲವು ಅನುಮಾನಗಳಿವೆ ಎನ್ನುವ ಮೂಲಕ ರಾಮಲಿಂಗಮ್ ಅವರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಹೀಗಾಗಿ ಚುನಾವಣೆ ಎದುರಿಸುತ್ತಿರುವ ತಮಿಳುನಾಡಿನಲ್ಲಿ ಅದರಲ್ಲಿಯೂ ಕರುಣಾನಿಧಿ ಬೆಂಬಲಿಗರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ..

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರು ಅನುಮಾನ ವ್ಯಕ್ತಪಡಿಸಿದ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸಾವಿನ ಕುರಿತಾಗಿಯೂ ತಮಗೂ ಅನುಮಾನವಿದೆ ಈ ಸಂಬಂಧ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಎಂಕೆ ಸ್ಡಾಲಿನ್ ಅವರು ವಿರೋಧ ಪಕ್ಷದ ನಾಯಕರಾಗುವ ಸಮಯದಲ್ಲಿ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಸಮ್ಮುಖದಲ್ಲಿ ಏನೆಲ್ಲಾ ಮಾತುಕತೆಗಳಾಗಿವೆ ಎನ್ನುವುದು ನಮಗೆ ಗೊತ್ತಿದೆ, ಅದನ್ನು ಜನರ ಮುಂದೆ ಇಡುವುದಾಗಿ ಅವರು ತಿಳಿಸಿದ್ದಾರೆ.

ಸ್ಟಾಲಿನ್ ಅವರು ಮುಖ್ಯಮಂತ್ರಿ ಯಾಗಬೇಕು ಎನ್ನುವ ಏಕೈಕ ಕಾರಣದಿಂದ ಆಡಳಿತಾರೂಢ ಎಐಎಡಿಎಂಕೆ ಮತ್ತು ಬಿಜೆಪಿ ನಾಯಕರ ವಿರುದ್ದ ಮಾಡುತ್ತಿರುವ ಆರೋಪಗಳು ಆಧಾರರಹಿತವಾದದ್ದು ಎಂದು ಅವರು ತಿಳಿಸಿದ್ದಾರೆ.

ತಮಿಳುನಾಡು ರಾಜ್ಯದಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕರುಣಾನಿಧಿ ಅವರು ೨೦೧೮ರ ಆಗಸ್ಟ್ ೭ ರಂದು ತಮ್ಮ ೯೪ನೇ ವಯಸ್ಸಿನಲ್ಲಿ ನಿಧನರಾಗಿದ್ದರು.