ಕರುಣಾದಿಂದ ಮಹಾತ್ಮ ಗಾಂಧಿ ಮಾಧ್ಯಮ ಸೇವಾ ಪ್ರಶಸ್ತಿ ಪ್ರಧಾನ

 ದಾವಣಗೆರೆ.ಜ.೭; ಪ್ರಸ್ತುತ ಕವಲು ದಾರಿಯಲ್ಲಿರುವ ಸಮಾಜವನ್ನು ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ನಿವೃತ್ತ ರಾಜ್ಯಶಾಸ್ತ್ರಪ್ರಾಧ್ಯಾಪಕರು ಹಾಗೂ ಅನುವಾದಕರಾದಂತಹ ಎಂ. ಬಸವರಾಜ್‌ ಹೇಳಿದರು.ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ  ನಡೆದ ಮಹಾತ್ಮ ಗಾಂಧಿ ಮಾಧ್ಯಮ ಸೇವಾ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ  ಮಾತನಾಡಿದ ಅವರು
ಸಮಾಜದ ಎಲ್ಲ ಸ್ಥರಗಳು ಸರಿಯಾದ ನಿಟ್ಟಿನಲ್ಲಿ ಮುನ್ನಡೆಯುವಂತೆ ಆಗಲು ಹಾಗೂ ಸಮಾಜ ಕಟ್ಟುವಲ್ಲಿ, ಪ್ರಜಾಪ್ರಭುತ್ವ ಸರಿಯಾಗಿ ನಿಭಾಯಿಸುವಲ್ಲಿ ಮಾಧ್ಯಮಗಳ ಪಾತ್ರ ಶ್ಲಾಘನೀಯ. ದೇಶದ ಮೂಲೆ ಮೂಲೆಗೂ ಮಾಹಿತಿಯನ್ನು ಒದಗಿಸಿ, ತನ್ನದೆ ರೀತಿಯಲ್ಲಿ ಮಾಹಿತಿ ಕ್ರಾಂತಿಯ ಮೂಲಕ ಅಭೂತಪೂರ್ವ ಸೇವೆಗೈಯುವ ಪ್ರಶಂಸಾರ್ಹ ಪಾತ್ರವನ್ನು ಮಾಧ್ಯಮಗಳು ಮಾಡುತ್ತಿವೆ. ಪ್ರಜಾಪ್ರಭುತ್ವದ 3 ಅಂಗಗಳಾದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಜೊತೆಗೆ ಮಾಧ್ಯಮ 4ನೇಯ ಅಂಗವಾಗಿ ಸ್ಥಾನವನ್ನು ಪಡೆದಿದೆ.
ಸನ್ಮಾನಿತರಾದ ಎಚ್.ಎಂ.ಪಿ.ಕುಮಾರ್,  ಪಿ.ಎಸ್.ಲೋಕೇಶ್ ಮತ್ತು ವೀರೇಶ್ ರವರು ಸನ್ಮಾನವನ್ನು ಸ್ವೀಕರಿಸುವುದರ ಜೊತೆಗೆ ತಮ್ಮ ವೃತ್ತಿ ಬದುಕಿನಲ್ಲಿ ಮಾಡಿದ ಸಮಾಜ ಸಾರ್ಥಕ ಸೇವೆಯ ಬಗ್ಗೆ ಸವಾಲುಗಳು ಹಾಗೂ ಸಾರ್ಥಕತೆಯನ್ನು ಹಂಚಿಕೊಂಡರು.  ಇದೇ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವನಕೆರೆ ಬಸವಲಿಂಗಪ್ಪನವರು ಮಹಾತ್ಮ ಗಾಂಧಿ ಹೆಸರಿನಲ್ಲಿ ಪ್ರಶಸ್ತಿ ಕೊಡಲು ಪ್ರಮುಖ ಕಾರಣ ಗಾಂಧಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಎಂತಹ ಕಷ್ಟದ ಸಂದರ್ಭದಲ್ಲಿಯೂ ಸಹ ಎದೆಗುಂದದೆ 6 ಪತ್ರಿಕೆಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಅಂತಹ ಗಾಂಧೀಜಿಯವರ ಕಾರ್ಯ ಮಾಧ್ಯಮ ಮಿತ್ರರಿಗೆ ಮಾದರಿಯಾಗಬೇಕು ಅದಕ್ಕಾಗಿ ಈ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದಾಗಿ ಸಂತಸ ವ್ಯಕ್ತ ಪಡಿಸಿದರು. ಮಾಧ್ಯಮದವರು ಒಬ್ಬ ವ್ಯಕ್ತಿಯನ್ನು ನಿರ್ಮಾಣ ಮಾಡಬಲ್ಲರು, ನಿರ್ನಾಮ ಮಾಡಬಲ್ಲರು. ಸಮಾಜದ ಅಭಿವೃಧ್ಧಿಯಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ದಯವಿಟ್ಟು ಅವರ ಹಿತಿಮಿತಿಗಳಲ್ಲೇ ಬಡವರ ಕಷ್ಟ ಕಾರ್ಪಣ್ಯಗಳಿಗೆ ಮಾಧ್ಯಮಗಳು ಸ್ಪಂದಿಸಲಿ.  ಸಮಾಜಕ್ಕಾಗಿಯೇ ತಮ್ಮನ್ನು ಮುಡುಪಾಗಿಟ್ಟು ಕಾಯಕವೆಸಗುತ್ತಿರುವ ಮಾಧ್ಯಮ ಮಿತ್ರರಿಗೆ ಕರುಣಾ ಟ್ರಸ್ಟ್ ಈ ಪ್ರಶಸ್ತಿ ನೀಡಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ. ಅವರ ಹೆಚ್ಚಿನ ಸೇವೆಗಾಗಿ ಪ್ರಕೃತಿ ಮಾತೆ ಸದಾ ಆರೋಗ್ಯ, ಆನಂದ, ಶಾಂತಿ, ನೆಮ್ಮದಿ, ಸಾರ್ಥಕ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇವೆ ಎಂದು ಹಾರೈಸಿದರು.   ಕರುಣಾ ಟ್ರಸ್ಟಿನ ಎಲ್ಲಾ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.