ಕರಾವಳಿ ನಾಡು ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರಾಗಿದೆ

ಗೋಕಾವಿ ಗೆಳೆಯರ ಬಳಗದ ಗೂಗಲ್ ಮೀಟ್‌ನಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ
ಮಂಗಳೂರು, ಮೇ ೨೮- ’ಕನ್ನಡ ಸಾಹಿತ್ಯಕ್ಕೆ ಎಲ್ಲ ಕಾಲಘಟ್ಟದಲ್ಲೂ ಕರಾವಳಿಯ ಕೊಡುಗೆ ದೊಡ್ಡದು. ಇಲ್ಲಿನ ಸುಂದರ ಪ್ರಕೃತಿ ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರೇರಣೆಯಾಗಿದೆ. ಸಾಹಿತ್ಯ ಮತ್ತು ಸಂಸ್ಕ್ರತಿ ಹಾಸುಹೊಕ್ಕಾಗಿರುವ ಈ ಪರಿಸರದಲ್ಲಿ ಪ್ರಾಚೀನ ಕಾಲದಿಂದಲೂ ನೂರಾರು ಸಾಹಿತಿಗಳು, ಕಲಾವಿದರು ಹುಲುಸಾದ ಬೆಳೆ ಬೆಳೆದಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಹುಶ್ರುತ ವಿದ್ವಾಂಸರಾದ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಅವರು ಗೋಕಾವಿ ಗೆಳೆಯರ ಬಳಗ ಕೋರೋನಾ ಲಾಕ್ ಡೌನ್ ನಿಮಿತ್ತ ಗೂಗಲ್ ಮೀಟ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೆಬಿನಾರ್ ನ ಹದಿನೇಳನೇ ಉಪನ್ಯಾಸ ಮಾಲಿಕೆಯಲ್ಲಿ ’ಕರಾವಳಿ ಸಾಹಿತ್ಯ ಮತ್ತು ಸಂಸ್ಕೃತಿ’ ಎಂಬ ವಿಷಯದ ಮೇಲೆ ಮಾತನಾಡಿದರು.
’ಕರಾವಳಿ ಭಾಗದ ರತ್ನತ್ರಯರೆಂದು ಹೆಸರಾದ ರತ್ನಾಕರ, ಪಾರ್ತಿಸುಬ್ಬ ಮತ್ತು ಮುದ್ದಣರಿಂದ ತೊಡಗಿ ಈಗಿನ ಯುವ ಬರಹಗಾರರ ವರೆಗೆ ಕಾವ್ಯ,ಕಥನ,ಕಾದಂಬರಿ ಹಾಗೂ ವಿಮರ್ಶಾ ಕ್ಷೇತ್ರಗಳಲ್ಲಿ ವಿಪುಲವಾದ ಕೃತಿರಚನೆಗಳಾಗಿವೆ. ಇಲ್ಲಿನ ಯಕ್ಷಾರಾಧನೆ, ದೈವಾರಾಧನೆ ಹಾಗೂ ನಾಗಾರಾಧನೆಗಳ ಹಿನ್ನೆಲೆಯಲ್ಲಿ ಸಂಸ್ಕೃತಿಯ ಹರವು ವಿಸ್ತಾರಗೊಂಡಿದೆ’ ಎಂದವರು ನುಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಜನ ವಿದ್ವಾಂಸರು.ವಿಮರ್ಶಕರು ಕವಿ ಸಾಹಿತಿ ಕಲಾವಿದರು ಉಪನ್ಯಾಸದ ನಂತರದ ಸಂವಾದದಲ್ಲಿ ಭಾಗವಹಿಸಿದ್ದರು.
ಮಂಗಳೂರಿನ ಹೆಸರಾಂತ ವೈದ್ಯ ಹಾಗೂ ಹಿರಿಯ ಬರಹಗಾರರಾದ ಡಾ.ಸುರೇಶ ನೆಗಳಗುಳಿ ಆಶಯ ಭಾಷಣ ಮಾಡಿ ’ವಿಶ್ವವ್ಯಾಪಿಯಾದ ಸಾಹಿತ್ಯ ಮನದ ಹಿತ ಬಯಸುತ್ತದೆ.ಕನ್ನಡ ನಾಡಿನ ಪ್ರಾಂತ್ಯವಾರು ಸಾಹಿತ್ಯ ಸಂಸ್ಕ್ರತಿಯನ್ನು ಅವಲೋಕಿಸಿದರೆ ಹಲವು ಜನ ಕುರುಡರು ಬೇರೆ ಬೇರೆ ಮಗ್ಗಲುಗಳಿಂದ ಆನೆ ನೋಡಿದಂತೆ’ ಎಂದು ನುಡಿದರು. ಕಳೆದ ದಿನದ ಉಪನ್ಯಾಸ ವಿದ್ವಾಂಸರುಗಳಿಗೆ ಬಳಗದ ಗೌರವಾಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಅವರು ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.
ಚಿತ್ರದುರ್ಗದ ಸಣ್ಣಗೌಡ ಬೂದಗಟ್ಟಿ ಸ್ವಾಗತಿಸಿ ಪರಿಚಯಿಸಿದರು. ಗೆಳೆಯರ ಬಳಗದ ಸಂಸ್ಥಾಪಕ ಹಾಗೂ ವೆಬಿನಾರ್ ಸಂಚಾಲಕ ಪ್ರಾ.ಜಯಾನಂದ
ಮಾದರ ನಿರೂಪಿಸಿ,ವಂದಿಸಿದರು.