ಕರಾವಳಿಯ ಕೆಲ ಭಾಗಗಳಲ್ಲಿ ಭಾರೀ ಮಳೆ

ಬೆಂಗಳೂರು,ಮೇ.೨೭-ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಕೆಲವು ಕಡೆ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಉಳಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ ಸೇರಿದಂತೆ ಚಾಮರಾಜನಗರದಲ್ಲೂ ಮಳೆಯ ಅಬ್ಬರ ಇರಲಿದೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೊಡಗು ಸೇರಿದಂತೆ ಕೋಲಾರದಲ್ಲೂ ಮಳೆಯಾಗಲಿದೆ.
ಕಳೆದೆರಡು ದಿನಗಳಿಂದ ಬೆಂಗಳೂರಲ್ಲಿ ವರುಣ ತಣ್ಣಗಾಗಿದ್ದು, ಇಂದು ಸಾಮಾನ್ಯವಾಗಿ ಬೆಳಗ್ಗೆ ಬಿಸಿಲಿನಿಂದ ಕೂಡಿದರೆ, ಮಧ್ಯಾಹ್ನದ ಸಮಯ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ ೩೨ ಮತ್ತು ಕನಿಷ್ಠ ಉಷ್ಣಾಂಶ ೨೧ ಡಿಗ್ರಿ ಸೆಲ್ಸಿಯಸ್ ಇರಲಿದೆ.
ತಾಪಮಾನ ಏರಿಕೆ ಸಾಧ್ಯತೆ:
ಮುಂದಿನ ೨೪ ಗಂಟೆಯಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ ೩೦ ರಿಂದ ೪೦ ಕಿ.ಮೀ. ಇರುವ ಸಾಧ್ಯತೆ ಇದೆ. ಮಳೆ ನಡುವೆಯು ಗರಿಷ್ಠ ಉಷ್ಣಾಂಶವು ರಾಜ್ಯದ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ೨-೩ ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.