ಕರಾವಳಿಯಲ್ಲಿ ಸಂಭ್ರಮದ ಪಾಮ್‌ಸಂಡೇ ಆಚರಣೆ

ಮಂಗಳೂರು, ಮಾ.೨೯- ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಏಸು ಕ್ರಿಸ್ತರು ಜರುಸಲೇಂ ನಗರ ಪ್ರವೇಶಿಸಿದಾಗ ಅಲ್ಲಿನ ಜನರು ಅದ್ದೂರಿಯಾಗಿ ಸ್ವಾಗತ ಕೋರಿದ ಮತ್ತು ಅಂದಿನಿಂದ ಮರಣದ ತನಕ ಅವರು ಅನುಭವಿಸಿದ ಸಂಕಷ್ಟಗಳ ನೆನಪಿನಲ್ಲಿ ಆಚರಿಸಲಾಗುವ ಗರಿಗಳ ರವಿವಾರ (ಪಾಮ್ ಸಂಡೆ) ವನ್ನು ದ.ಕ.ಜಿಲ್ಲಾದ್ಯಂತ ಕ್ರೈಸ್ತರು ರವಿವಾರ ಆಚರಿಸಿದರು. ಕೊರೋನ ಎರಡನೇ ಅಲೆಯ ಆತಂಕದ ಮಧ್ಯೆಯೂ ಕೋವಿಡ್ -೧೯ ನಿಯಮಗಳನ್ನು ಯಥಾವತ್ತಾಗಿ ಪಾಲಿಸಿದ ಕ್ರೈಸ್ತರು ಚರ್ಚ್‌ಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದು ಏಸು ಕ್ರಿಸ್ತರಿಗೆ ಘೋಷಣೆ ಹಾಕಿ ಶ್ರದ್ಧಾ ಭಕ್ತಿಯಿಂದ ಬಲಿ ಪೂಜೆ ಅರ್ಪಿಸಿದರು. ಕೋವಿಡ್-೧೯ ನಿಯಮಾವಳಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಮೆರವಣಿಗೆಗಳನ್ನು ರದ್ದುಪಡಿಸಲಾಗಿತ್ತು. ಚರ್ಚಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿತ್ತು. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಬಲಿಪೂಜೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಗುರುವಾರ ಏಸು ಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ರವಿವಾರ ಏಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ. ಮಂಗಳೂರು ಬಿಷಪ್ ಅತಿ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನಗರದ ರೊಝಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ರೊಜಾರಿಯೊ ಕೆಥೆಡ್ರಲ್‌ನಲ್ಲಿ ಸ್ಥಳೀಯ ರೆಕ್ಟರ್ ವಂ. ಆಲ್ಫ್ರೆಡ್ ಜೆ. ಪಿಂಟೊ, ಸಹಾಯಕ ಗುರು ವಂ. ವಿನೋದ್ ಲೋಬೊ, ವಂ. ವಿಕ್ಟರ್ ಡಿಸೋಜ, ವಂ. ಅನಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.