ಕರಾವಳಿಯಲ್ಲಿ ವರುಣಾರ್ಭಟ: ಉಡುಪಿಯಲ್ಲಿ ಓರ್ವ ಸಾವು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೫:ಉಡುಪಿ, ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಬಳಿ ತಡರಾತ್ರಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಧಾರಕಾರ ಮಳೆಯಿಂದಾಗಿ ಆಯತಪ್ಪಿ ಕೆರೆಗೆ ಬಿದ್ದು, ಮೃತಪಟ್ಟಿದ್ದಾರೆ. ಹೋಟೆಲ್ ಕೆಲಸ ಮಾಡುವ ದಿವಾಕರ್‌ರವರು ಕೆಲಸ ಮುಗಿಸಿ ತೆಕ್ಕಟ್ಟೆಯ ಮಲ್ಯಾಡಿ ಸಮೀಪ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ದಿವಾಕರ್‌ಗೆ ಕಾಲು ನೋವು ಇದ್ದ ಕಾರಣ ವಾಹನದಿಂದ ಇಳಿಯಲಾಗದೆ ಬೈಕ್ ಜಾರಿ ಕೆರೆಗೆ ಉರುಳಿ ಬಿದ್ದು ಮೃತಪಟ್ಟಿದ್ದಾರೆ. ತಡರಾತ್ರಿ ಘಟನಾ ಸ್ಥಳಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಆಗಮಿಸಿ ನದಿಯಿಂದ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಇದರೊಂದಿಗೆ ಮಹಾ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿಯನ್ನು ದಿವಾಕರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.ಮತ್ತೊಂದೆಡೆ ಮಂಗಳೂರಿನಲ್ಲೂ ವರುಣನ ಆರ್ಭಟ ತೀವ್ರಗೊಂಡಿದೆ. ಮಂಗಳೂರು ನಗರದ ಪಿವಿಎಸ್ ಬಳಿ ಗುಡ್ಡ ಕುಸಿದು ಬಿದ್ದಿದೆ. ಪಿವಿಎಸ್‌ನಿಂದ ಕೆ.ಎಸ್ ರಾವ್ ರಸ್ತೆಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಗುಡ್ಡ ಕುಸಿದಿದ್ದರಿಂದ ಹಳೆಯ ಕಟ್ಟಡದ ಗೋಟೆ ಕುಸಿತಗೊಂಡಿದೆ. ಸ್ಥಳಕ್ಕೆ ಟಾರ್ಪಾಲ್ ಹೊದಿಕೆ ಹಾಕಲಾಗಿದ್ದು, ಇನ್ನಷ್ಟು ಮಣ್ಣು ಕುಸಿಯದಂತೆ ಮುನ್ನೆಚ್ಚೆರಿಕೆ ಕ್ರಮಕೈಗೊಳ್ಳಲಾಗಿದೆ.
ಇತ್ತ ಕಾರವಾರ ಜಿಲ್ಲೆಯಲ್ಲೂ ವರ್ಷಧಾರೆ ಮುಂದುವರೆದಿದೆ, ಧಾರಾಕಾರ ಮಳೆಯಿಂದಾಗಿ ಕಾರವಾರದ ಹಬ್ಬು ವಾಡದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಡಿಪೋ ಕಚೇರಿ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಗಿದೆ. ಡಿಪೋದಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿ. ದಾಖಲೆಗಳು ನೀರು ಪಾಲಾಗಿದೆ.
ಮಳೆಯ ಹೊಡೆತಕ್ಕೆ ಕಾರವಾರ, ಭಟ್ಕಳ ನಗರದ ರಸ್ತೆಗಳು ಜಲಾವೃತಗೊಂಡಿದ್ದು, ನಾಗರಿಕರು ಪರದಾಡುವಂತಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.