ಕರಾವಳಿಯಲ್ಲಿ ಗಸ್ತು ಹಡಗು ನಿಯೋಜಿಸಿದ ಐಸಿಜಿಎಸ್

ಕಾರವಾರ,ಏ3: ಉತ್ತರಕನ್ನಡ ಕರಾವಳಿಯಲ್ಲಿ ಗಸ್ತಿಗಾಗಿ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿಎಸ್) ಎರಡು ಫಾಸ್ಟ್ ಪೆಟ್ರೋಲ್ ಹಡಗುಗಳನ್ನು ಕಾರವಾರ ವಿಭಾಗಕ್ಕೆ ನಿಯೋಜಿಸಿದೆ. ಇದರಿಂದ ಜಿಲ್ಲೆಯ ಕರಾವಳಿಯ ಬಲವನ್ನು ಇನ್ನಷ್ಟು ಹೆಚ್ಚಿಸದಂತಾಗಿದೆ.
ಐಸಿಜಿಎಸ್ ಸಾವಿತ್ರಿಬಾಯಿ ಫುಲೆ ಮತ್ತು ಐಸಿಜಿಎಸ್ ಕಸ್ತೂರಬಾ ಗಾಂಧಿ ಎರಡು ಫಾಸ್ಟ್ ಪೆಟ್ರೋಲ್ ಹಡಗುಗಳನ್ನು ಇದೀಗ ಕಾರವಾರಕ್ಕೆ ನಿಯೋಜಿಸಿದೆ. ಈ ಎರಡೂ ಹಡಗುಗಳು ಗೋವಾ ಶಿಪ್‍ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಫಾಸ್ಟ್ ಪೆಟ್ರೋಲ್ ಹಡಗುಗಳಾಗಿವೆ (ಎಫ್‍ಪಿವಿ). ಇವು ಗಂಟೆಗೆ 35 ನಾಟ್ಸ್ ವೇಗವನ್ನು ಕ್ರಮಿಸಬಲ್ಲ ಸಮರ್ಥ್ಯ ಹೊಂದಿದ್ದು, 30 ಎಂಎಂ ಸಿಆರ್ ಎನ್ ಗನ್ ಅನ್ನು ಕೂಡ ಇದು ಹೊಂದಿದೆ.
ಇವುಗಳಲ್ಲಿ ಇತ್ತೀಚಿಗೆ ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಅಲ್ಲದೇ ಕಣ್ಗಾವಲು, ಗಸ್ತು ತಿರುಗಲು ಸಹ ವಿನ್ಯಾಸಗೊಳಿಸಲಾಗಿದೆ ಮತ್ತು ಆಳವಿಲ್ಲದ ನೀರಿನ ಕಾರ್ಯಾಚರಣೆಗೂ ಇವು ಸಮರ್ಥವಾಗಿದೆ. ಎರಡೂ ಎಫ್‍ಪಿವಿಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ, ಕಡಲ್ಗಳ್ಳತನ ವಿರೋಧಿ ಗಸ್ತು, ಮೀನುಗಾರಿಕೆ ರಕ್ಷಣೆ ಮತ್ತು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳಿಗೆ ಸಹ ಇದು ಸಮರ್ಥವಾಗಿವೆ.
ವಿಶೇಷವೆಂದರೇ ಈ ಎರಡೂ ಹಡಗುಗಳು ಹಲವಾರು ಎಸ್‍ಎಆರ್ ಕಾರ್ಯಾಚರಣೆಗಳು, ಕಡಲ್ಗಳ್ಳತನ ವಿರೋಧಿ ಗಸ್ತು ಮತ್ತು ಕಣ್ಗಾವಲು ಪ್ರಯತ್ನಗಳಲ್ಲಿ ಭಾಗಿಯಾಗಿವೆ. ಇದಲ್ಲದೆ, ಹಲವಾರು ಸಂದರ್ಭಗಳಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಇವುಗಳ ಮೂಲಕ ನೆರವು ನೀಡಲಾಗಿದೆ. ಈ ಎರಡು ಎಫ್‍ಪಿವಿಗಳು ಕೋಸ್ಟ್ ಗಾರ್ಡ್ ಸ್ಟೇಷನ್ ಕಾರವಾರದ ಸಾಮರ್ಥ್ಯಗಳಿಗೆ ಹೊಸ ಆಯಾಮವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.