ಕರಾವಳಿಯಲ್ಲಿ ಐದು ದಿನ ಮಳೆ

ಬೆಂಗಳೂರು,ಜು.೧೮- ರಾಜ್ಯಾದ್ಯಂತ ಇಂದಿನಿಂದ ಮುಂಗಾರು ಚುರುಕುಗೊಳ್ಳಲಿದ್ದು, ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ.ಇದೇ ವೇಳೆ ಮುಂದಿನ ಐದು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಹವಾಮಾನ ಇಲಾಖೆ ಮೊದಲ ಮೂರು ದಿನ ಯೆಲ್ಲೊ ಹಾಗೂ ಕೊನೆಯ ಎರಡು ದಿನ ಆರೇಂಜ್ ಅಲರ್ಟ್ ನೀಡಿದೆ.
ಹವಾಮಾನ ಇಲಾಖೆ ಮೊದಲ ಮೂರು ದಿನ ಹಳದಿ ಅಲರ್ಟ್ ಘೋಷಿಸಿದೆ.ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ಜುಲೈ ೧೪ರಿಂದ ಈ ಭಾಗದಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗಿತ್ತು. ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಿರುವ ವರದಿಗಳಿವೆ.
ಉಳಿದಂತೆ ರಾಜ್ಯದ ಉತ್ತರ ಒಳನಾಡಿನಲ್ಲಿ ನಿರೀಕ್ಷಿತ ಮಳೆಯಾಗದೇ ರೈತರು ಕಂಗಾಲಾಗಿದ್ದರು.ಜೂನ್ ಎರಡನೇ ವಾರದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ರೈತರು ಬೆಳೆ ಒಣಗುವ ಆತಂಕದಲ್ಲಿದ್ದರು. ಆದರೆ ಈಗ ಹವಾಮಾನ ಇಲಾಖೆ ನೀಡಿದ ವರದಿಯಂತೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಉತ್ತರ ಒಳನಾಡು ಪ್ರದೇಶಗಳಾದ ಬಾಗಲಕೋಟೆ, ಬೆಳಗಾವಿ, ಬೀದರ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಹಾಗೇ ಮುಂದಿನ ಮೂರು ದಿನ ಅಂದರೆ ೧೯, ೨೦, ೨೧ ರಂದು ಬಾಗಲಕೋಟೆ, ಬೆಳಗಾವಿ, ಬೀದರ, ಕಲಬುರ್ಗಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ ೩೦ ರಿಂದ ೪೦ ಕಿ.ಮೀ. ಇರಲಿದೆ ಅಲ್ಲದೆ, ಮುಂದಿನ ಮೂರು ದಿನಗಳಲ್ಲಿ ಅಂದರೆ ೧೯, ೨೦ ಮತ್ತು ೩೧ ರಂದು ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಕೆಲವೆಡೆ ಭೂಕುಸಿತವೂ ಸಂಭವಿಸಿದೆ. ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಸುಮಾರು ಆಸ್ತಿಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ೧೫ ದಿನಗಳಿಂದ ಮೋಡ ಕವಿದ ವಾತಾವರಣದೊಂದಿಗೆ ಚಳಿಯೂ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ರವಾನಿಸಿದೆ.