ಕರಾಳ ದಿನ ಆಚರಣೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ

ಹುಬ್ಬಳ್ಳಿ ಮೇ 26 : ರೈತ ಕರಾಳ ದಿನಾಚರಣೆ ಅಂಗವಾಗಿ ಸರ್ಕಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳಸಾ ಬಂಡೂರಿ ಹೋರಾಟ ಸಮಿತಿ ವತಿಯಿಂದ ಹುಬ್ಬಳ್ಳಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮೂರು ಕೃಷಿ ಕಾಯ್ದೆಗಳ ರದ್ಧತಿಗಾಗಿ, ವಿದ್ಯುತ್ ಮಸೂದೆ ವಾಪಸ್ಸಾತಿಗಾಗಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಖಾತರಿ ಕಾನೂನು ಜಾರಿ ಮಾಡಲು ಆಗ್ರಹಿಸಿ “ದೆಹಲಿ ಚಲೋಗೆ ಬಂದಿದ್ದ ಲಕ್ಷಾಂತರ ರೈತರನ್ನು ದೆಹಲಿ ಗಡಿಗಳಲ್ಲಿ ತಡೆ ಹಿಡಿಯಲಾಗಿತ್ತು. ಅಂದಿನಿಂದಲೂ ಬಿಜೆಪಿ ಸರ್ಕಾರದ ಎಲ್ಲ ದೌರ್ಜನ್ಯ ದಬ್ಬಾಳಿಕೆ, ಎದುರಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೊಂದು ದೀರ್ಘಾವಧಿಗೆ ಚಳಿ, ಗಾಳಿ, ಬಿಸಿಲೆನ್ನದೇ ನಡೆಯುತ್ತಿರುವ ಪ್ರತಿಭಟನೆಯಲ್ಲೇ 400 ಕ್ಕೂ ಹೆಚ್ಚು ರೈತ ಪ್ರತಿಭಟನಾಕಾರರು ಹುತಾತ್ಮರಾಗಿದ್ದರೂ 180 ದಿನಗಳು ಚಳುವಳಿ ಮುಂದುವರೆಯುತ್ತಿದೆ. ರೈತರ ಜೊತೆ ಮಾತುಕತೆಗೆ ತಯಾರಿದ್ದೇನೆ ಎಂದ ರಾಜ್ಯ ಸಭೆಯಲ್ಲಿ ತಿಳಿಸಿದ ಕೇಂದ್ರ ಸರ್ಕಾರ ರೈತರ ಜೊತೆ ಮಾತು ಕಥೆ ನಡೆಸುತ್ತಿಲ್ಲ ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಆರೋಪಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅವಧಿಯಲ್ಲೇ ನಿರುದ್ಯೋಗ ಅತ್ಯಂತ ಗರಿಷ್ಠ ಪ್ರಮಾಣಕ್ಕೆ ಎರಿದ್ದು, ಜಿಡಿಪಿ ಪಾತಾಳಕ್ಕೆ ಕುಸಿದಿದೆ. ನೋಟು ರದ್ದು, ಜಿ.ಎಸ್.ಟಿ ಯಂತಹ ಕಾರಣದಿಂದಾಗಿ ನಮ್ಮ ಆರ್ಥಿಕ ಹಾಗೂ ಜನ ಜೀವನದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಿದ್ದನ್ನು ದೇಶ ಮರೆಯುವಂತಿಲ್ಲ.

ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ವಿದ್ಯುತ್ ಮಸೂದೆ ವಾಪಸ್ಸು ಪಡೆಯಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಶಾಸನಬದ್ಧ ಖಾತರಿಪಡಿಸುವ ಕಾಯ್ದೆ ಜಾರಿಗೆ ತರಬೇಕು ಎಂದು ಕರಾಳ ದಿನಾಚರಣೆ ಮೂಲಕ ಕಳಸಾ ಬಂಡೂರಿ ಹೋರಾಟ ಸಮಿತಿ ವತಿಯಿಂದ ಒತ್ತಾಯಿಸಲಾಯಿತು.

ರಾಜ್ಯ ಸರ್ಕಾರವು ಭೂಸುಧಾರಣಾ ಕಾಯಿದೆ, ಎಪಿಎಂಸಿ ಕಾಯ್ದೆ, ರೈತ ವಿರೋಧಿ ತಿದ್ದುಪಡಿಗಳನ್ನು ಜಾರಿಗೆ ತಂದಿದೆ. ಈ ಎಲ್ಲಾ ವಿಫಲತೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಹಾಗೂ ಆಮ್ಲಜನಕ ಕೊರತೆಯಿಂದ ಚಾಮರಾಜನಗರ ಮತ್ತಿತರ ಕಡೆ ಸಾವನ್ನಪ್ಪಿದ ರೋಗಿಗಳ ಕುಟುಂಬಗಳಿಗೆ ಕನಿಷ್ಠ 10 ಲಕ್ಷ ರೂ. ಗಳ ಪರಿಹಾರವನ್ನು ನೀಡಬೇಕೆಂದು, ಹಣ್ಣು ತರಕಾರಿ ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಪ್ರಕಟಿಸಿರುವ ನಷ್ಟ ಪರಿಹಾರ ಪ್ಯಾಕೇಜ್ ಅನ್ನು 30 ಸಾವಿರ ರೂಪಾಯಿ ಗಳಿಗೆ ಹೆಚ್ಚಿಸಬೇಕು ಎಂದು ಹುಬ್ಬಳ್ಳಿ ತಹಶಿಲ್ದಾರ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರಿಗೆ ಕಳಸಾ ಬಂಡೂರಿ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರೈತ ಮುಖಂಡ ಸಿದ್ದಣ್ಣ ತೇಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.