ಕೋಲಾರ,ಮಾ.೨೫- ಕರಾಟೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಕರಾಟೆಪಟು ರುಮಾನಾ ಕೌಸರ್ ಅವರು ಇಂಡಿಯಾ ಬುಕ್ ಆಪ್ ರೆಕಾರ್ಡ್ ೨೦೨೩-೨೪ರ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಕೋಲಾರದ ಪ್ರಶಾಂತ ನಗರ, ೩ನೇ ಕ್ರಾಸ್ ನಿವಾಸಿಗಳಾದ ಅಂತರಾಷ್ಟ್ರೀಯ ಕರಾಟೆಪಟು ರುಮಾನಾ ಕೌಸರ್ ಅವರ ತಂದೆ ಆಟೋ ಚಾಲಕ ರಶೀದ್ ಅಹಮ್ಮದ್, ತಾಯಿ ಶಭಾನಾ ಧರ್ಮಸ್ಥಳ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಲೇಶಿಯಾ, ಸಿಂಗಾಪೂರ್ ಸೇರಿದಂತೆ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಹಲವಾರು ರಾಜ್ಯಗಳಲ್ಲಿ ನಡೆದ ವಿವಿಧ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗಳಿಸಿ ಜಿಲ್ಲೆ, ರಾಜ್ಯ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಸತಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ೩೦೦೦ ಹೆಣ್ಣು ಮಕ್ಕಳಿಗೆ ಒಬವ್ವ ಆತ್ಮ ರಕ್ಷಣೆ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ.
ರುಮಾನ್ ಕೌಸರ್ ಅವರು ಇದುವರೆಗೂ ೩೫ ಚಿನ್ನ, ೧೦ ಬೆಳ್ಳಿ, ೧೦ ಕಂಚು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಗೌರವಿಸಿ ನೆನಪಿನ ಕಾಣಿಗಳನ್ನು ನೀಡಿ ಅಭಿನಂದಿಸಿರುತ್ತಾರೆ.
ಮುಂದೆ ಇನ್ನಷ್ಟು ಕೀರ್ತಿ ಪತಾಕೆ ಬೆಳಗುವಂತಾಗಲಿ ಎಂದು ಕೋಲಾರದ ಜನತೆ ಅಭಿನಂದಿಸಿದ್ದಾರೆ.