ಕರಾಟೆ ಆತ್ಮ ರಕ್ಷಣಾ ಕಲೆಯಾಗಿದೆ : ಕರಾಟೆ ಶಿಕ್ಷಕ ಗೌಳೇರ ನಾಗರಾಜ್


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಏ.18: ಮಹಿಳೆಯರಿಗೆ ಅತ್ಯವಶ್ಯಕವಾದ ಆತ್ಮರಕ್ಷಣಾ ಕಲೆ ಕರಾಟೆಯಾಗಿದ್ದು, ಇದನ್ನ ಕಲಿತು ಹೆಣ್ಣು ಮಕ್ಕಳು ಸಶಕ್ತರಾಗಿ ಎಂದು ಮರಿಯಮ್ಮನಹಳ್ಳಿಯ ಹಿರಿಯ ಕರಾಟೆ ಶಿಕ್ಷಕ ಗೌಳೇರ ನಾಗರಾಜ್ ಹೇಳಿದರು.
ಅವರು ಮರಿಯಮ್ಮನಹಳ್ಳಿ ಮತ್ತು ಸುತ್ತಲಿನ ಗ್ರಾಮಗಳ ಹೆಣ್ಣು ಮಕ್ಕಳಿಗೆ ಪಟ್ಟಣದ ಹೈಸ್ಕೂಲ್ ಆವರಣದಲ್ಲಿ ನಿಧಿಕಾ ಮಾರ್ಷಲ್ ಆರ್ಟ್ಸ್‌ವತಿಯಿಂದ ಹಮ್ಮಿಕೊಂಡಿದ್ದ 40 ದಿನದ ಉಚಿತ ಕರಾಟೆ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಕರಾಟೆಯು ಆತ್ಮ ರಕ್ಷಣೆ ಜೊತೆಗೆ ಶಿಸ್ತು, ಆರೋಗ್ಯ ಕಾಳಜಿ, ಸಮಯ ಪ್ರಜ್ಞೆಯನ್ನು ಬೆಳೆಸುತ್ತದೆ. ಜೊತೆಗೆ ಇದು ಅತ್ಯಂತ ಬಲಶಾಲಿ ಕ್ರೀಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದಲೂ ಸಹ ಕೆಲ ಸರಕಾರಿ ಶಾಲೆಗಳಲ್ಲಿ ಕರಾಟೆ ಶಿಕ್ಷಣ ನೀಡುವುದು ಶ್ಲಾಘನೀಯ ಕಾರ್ಯವಾಗಿದೆ.  ಪ್ರತಿ ಶಾಲೆಗಳಿಗೂ ಕರಾಟೆ ಶಿಕ್ಷಕರನ್ನು ನೇಮಿಸಿಕೊಂಡರೆ ಶಾಲೆಯಲ್ಲಿನ ಪ್ರತಿ ಹೆಣ್ಣು ಮಕ್ಕಳು ಈ ಕಲೆಯಲ್ಲಿ ನಿಪುಣರಾಗುತ್ತಾರೆ. ಅಲ್ಲದೇ ಇದರಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಶಿಬಿರವನ್ನು ಮಕ್ಕಳು ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಶಿಬಿರದ ಸಹ ಶಿಕ್ಷಕ ಮೇದಾರ್ ಪ್ರೇಮ್, ವಿ. ನಿತಿನ್ ಕುಮಾರ ಹಾಗೂ ಹಿರಿಯ ಕರಾಟೆ ವಿದ್ಯಾರ್ಥಿಗಳಾದ ಟಿ.ಆರ್. ವಿನಾಯಕ, ವಿ. ಸಂತೋಷ್, ಕೇಶವ ಮೂರ್ತಿ, ನವಾಜ್ ಇದ್ದರು.
ಶಿಬಿರವು  ಮೇ 25 ರವರೆಗೆ ಉಚಿತವಾಗಿ ನಡೆಯಲಿದ್ದು ಮರಿಯಮ್ಮನಹಳ್ಳಿ ಹೋಬಳಿ ಹೆಣ್ಣು ಮಕ್ಕಳು ಸದುಪಯೋಗಿಸಿ ಕೊಳ್ಳಲು ತಿಳಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7676040135 ಸಂಪರ್ಕಿಸಲು ಕೋರಲಾಗಿದೆ.