ಕರಸೇವಕ ವಿದ್ಯಾಸಾಗರ್‍ಗೆ ವಿವಿಧೆಡೆ ಸನ್ಮಾನ

ಕಲಬುರಗಿ:ಜ.24: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ನಡೆದ ಕರಸೇವೆಯಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಮಾಜಿ ಅಧ್ಯಕ್ಷ ಹಾಗೂ ಹಿರಿಯ ಬಿಜೆಪಿ ಮುಖಂಡ ವಿದ್ಯಾಸಾಗರ ಡಿ. ಕುಲಕರ್ಣಿ ಅವರನ್ನು ಸೋಮವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ಸನ್ಮಾನಿಸಲಾಯಿತು.
ಕೃಷ್ಣೇಶ್ವರ ದೇವಸ್ಥಾನ, ಜೇವರ್ಗಿ ಕಾಲೋನಿಯ ಶ್ರೀ ರಾಘವೇಂದ್ರಸ್ವಾಮಿ ಮಠ ಹಾಗೂ ವಿಠ್ಠಲನಗರದ ಶ್ರೀ ಹನುಮಾನ ದೇವಸ್ಥಾನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ವಿದ್ಯಾಸಾಗರ ಕುಲಕರ್ಣಿ ಅವರು 1992ರಲ್ಲಿ ಬಿಜೆಪಿ ಮುಖಂಡ, ಎಂಎಲ್‍ಸಿ ದಿ. ಡಾ. ಎಂ.ಆರ್. ತಂಗಾ ನೇತೃತ್ವದ ತಂಡದಲ್ಲಿ ಅಯೋಧ್ಯೆಗೆ ತೆರಳಿ ಕರಸೇವೆಯಲ್ಲಿ ಭಾಗಿಯಾಗಿ ಮುಂಚೂಣಿಯಲ್ಲಿದ್ದರು, ಅವರನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ಎಂದು ಸಂಸದ ಡಾ. ಉಮೇಶ ಜಾಧವ, ಆರ್‍ಎಸ್‍ಎಸ್ ಪ್ರಮುಖ ಕೃಷ್ಣಾ ಜೋಶಿ ಮತ್ತಿತರರು ಶ್ಲಾಘಿಸಿದರು.
`ರಾಮನ ಮಂದಿರಕ್ಕಾಗಿ ಅಂದು ಅಯೋಧ್ಯೆಗೆ ಹೋಗಿ ಕರಸೇವೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದೇ ಭಾವಿಸಿದ್ದೇನೆ, ಅಂದು ನಮ್ಮ ಜೊತೆಗೆ ಬಂದಿದ್ದ ಕಲಬುರಗಿಯ ಮಹಾನಗರ ಪಾಲಿಕೆ ಉದ್ಯೋಗಿ ರಂಜೀತ್ ಸಿಂಗ್ ತಿವಾರಿ, ದಿ. ವೀರಣ್ಣ ಜಮಾದಾರ್ ಅವರು ತಮ್ಮ ಜೀವದ ಹಂಗನ್ನೂ ತೊರೆದೂ ಬಾಬ್ರಿ ಮಸೀದಿ ಮೇಲೆ ಹತ್ತಿದ್ದರು. ಆಗ ರಂಜೀತ್ ಸಿಂಗ್ ತಿವಾರಿ ತೀವ್ರವಾಗಿ ಗಾಯಗೊಂಡು ಫೈಜಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂಥವರ ಭಕ್ತಿ, ಶ್ರದ್ಧೆ, ತ್ಯಾಗ ಮನೋಭಾವಕ್ಕೆ ಪ್ರತಿಫಲವೆಂಬಂತೆ ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೊಂಡಿದೆ, ಇದು ನಮ್ಮಲ್ಲಿ ಸಾರ್ಥಕಭಾವ ಮೂಡಿಸಿದೆ. ನಮ್ಮ ಜೀವಿತಾವಧಿಯಲ್ಲೇ ರಾಮ ಮಂದಿರ ನಿರ್ಮಾಣಗೊಂಡಿದ್ದನ್ನು ಕಂಡು ಮೂಕವಿಸ್ಮಿತರಾಗಿದ್ದೇವೆ ಎಂದರು.
ಜೇವರ್ಗಿ ಕಾಲನಿಯ ರಾಯರ ಮಠದಲ್ಲಿ ವಿದ್ಯಾಸಾಗರ ಕುಲಕರ್ಣಿ ಅವರನ್ನು ಶ್ರೀಗುರುರಾಘವೇಂದ್ರಸ್ವಾಮಿ ಭಕ್ತವೃಂದದ ಅಧ್ಯಕ್ಷ ನರೇಂದ್ರ ಆಚಾರ್ಯ ಫಿರೋಜಾಬಾದ್, ಆಡಳಿತ ಮಂಡಳಿ ನಿರ್ದೇಶಕರಾದ ಪ್ರಶಾಂತ ಕೊರಳ್ಳಿ ವಕೀಲರು, ರಘುರಾಮ ದೋಟಿಹಾಳ, ಆರ್‍ಎಸ್‍ಎಸ್ ಪ್ರಮುಖ ಕೃಷ್ಣಾ ಜೋಶಿ ಮತ್ತಿತರರು ಸನ್ಮಾನಿಸಿದರು.