ಕರವೇ ಸಂತ ಕನಕದಾಸರ ಜಯಂತಿ ಆಚರಣೆ

ವಿಜಯಪುರ, ನ.23-ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣ ವಿಜಯಪುರ ಜಿಲ್ಲಾ ಘಟಕವು ಪುರಂದರದಾಸರ ಸಮಕಾಲಿನ sಸಂತ ಕನಕದಾಸರ ಜಯಂತಿಯನ್ನು ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಶ್ರೀ ಕನಕದಾಸರು (ಮೂಲ ಹೆಸರು-ತಿಮ್ಮಪ್ಪನಾಯಕ) (1508-1606) ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರು ಎಂದರು.
ಜಿಲ್ಲಾ ಗೌರವಾಧ್ಯಕ್ಷ ವಸಂತರಾವ ಕೊರ್ತಿ ಮಾತನಾಡಿ ಹಾವೇರಿ ಜಿಲ್ಲೆಯ ಬಾಡಗ್ರಾಮವು ಕನಕದಾಸರು ಹುಟ್ಟಿದ ಸ್ಥಳ ಇವರು ಹಾಲಮತ ಸಮುದಾಯದಕ್ಕೆ ಸೇರಿದವರು ತಂದೆ ಭೀರಪ್ಪ ತಾಯಿ ಬಚ್ಚಮ್ಮ ವೃತ್ತಿ ಪಾಳಿಗಾರಿಕೆ ಕರ ವಸೂಲಿ ಮಾಡಿ ಶ್ರೀ ಕೃಷ್ಣ ದೇವರಾಯನಿಗೆ ಒಪ್ಪಿಸುತ್ತಿದ್ದರು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ.ಬನ್ನಟ್ಟಿ ಮಾತನಾಡಿ ಕತ್ತಿ ವರಸೆ, ಬಿಲ್ಲು ವಿದ್ಯೆಗಳಲ್ಲಿ ತಂದೆ ಪರಿಣಿತರು. ಸಮಾಜದ ಸಮಾನತೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಮೇಲು ಕೀಳು ಎಂಬ ಭೇದಭಾವವನ್ನು ತೊರೆದು ಹಾಕಿ ಸಮಾನತೆಗಾಗಿ ಹಲವರು ಗೀತೆಗಳನ್ನು ರಚಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮಾಶಂಕರಯ್ಯ ವಿರಕ್ತಮಠ, ವಸಂತರಾವ ಕುಲಕರ್ಣಿ, ಬಾಬು ಲಮಾಣಿ, ಗುರುರಾಜ ಪಂಚಾಳ, ಬಾಸು ರಾಠೋಡ, ಚನ್ನೆಗೌಡ ಪಾಟೀಲ, ಶರದ ದೇವಕುಳೆ, ಬಸವರಾಜ ಯಂಭತ್ನಾಳ, ಮನೋಜ ಹೊಸಮನಿ, ಕಾಂತು ಇಂಚಗೇರಿ ಮುಂತಾದವರು ಉಪಸ್ಥಿತರಿದ್ದರು.