ಕರವೇ ತಾಲೂಕು ಘಟಕ ಉದ್ಘಾಟನೆ

ಬ್ಯಾಡಗಿ,ಮಾ31: ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ಭಾಷೆ, ನಾಡು ನುಡಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದು, ಅದರಂತೆ ಹೊಸದಾಗಿ ಆಯ್ಕೆಯಾದ ವೇದಿಕೆಯ ಕಾರ್ಯಕರ್ತರು ಈ ಭಾಗದ ಸಮಸ್ಯೆಗಳನ್ನು ಅರಿತು ಹೋರಾಟ ಮಾಡಿ ಅಭಿವೃದ್ಧಿ ಮಾಡಲು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕ ಅಧ್ಯಕ್ಷ ಹನುಮಂತ ಬೋವಿ ಕರೆ ನೀಡಿದರು.
ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನೂತನ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಘಟನೆ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದೆ. ಅದರಂತೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರಾಮ ಘಟಕದಿಂದ ಕನ್ನಡ ಉಳಿಸಿ ಬೆಳೆಸುವ ಕೆಲಸದ ಜೊತೆಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಆಲಿಸಿ ಅವರ ಸಹಾಯಕ್ಕೆ ನಿಲ್ಲಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಹವಳನಾಯ್ಕ್, ಉಪಾಧ್ಯಕ್ಷರನ್ನಾಗಿ ಮಂಜುನಾಥ ಭೀಮಕ್ಕನವರ, ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಚಂದ್ರು ಕರಿಯಣ್ಣನವರ, ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ಹೊನ್ನಪ್ಪ ಹೊಸಮನಿ, ಖಜಾಂಚಿಯಾಗಿ ಹೊನ್ನಪ್ಪ ದೊಣ್ಣಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಫಕ್ಕೀರೇಶಿ ಪುಟ್ಟಣ್ಣನವರ, ಮಹಮ್ಮದ್ ಜಾಫರ್ ಕನವಳ್ಳಿ, ಸಲೀಂ ಯಾದವಾಡ ಸೇರಿದಂತೆ ಇನ್ನಿತರರಿದ್ದರು.
ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಕನ್ನಡದ ಅಭಿಮಾನಿಗಳು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ಸೇರ್ಪಡೆಯಾದರು.