ಕರವೇ ಕಾರ್ಯಕರ್ತರ ಬಂಧನ


ಬೆಳಗಾವಿ, ಮಾ 18: ಬೆಳಗಾವಿಯಲ್ಲಿ ಶಿವಸೇನಾ ಹಾಗೂ ಎಮ್‍ಇಎಸ್ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರದ ಗಡಿಗೆ ಹೋಗಲು ಯತ್ನಿಸಿದ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿಂದು ನೂರಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇತ್ತೀಚೆಗೆ ಎಮ್‍ಇಎಸ್ ಮುಖಂಡ ಶುಭಂ ಸೆಳಕೆ ಕನ್ನಡ ಬಣ್ಣದ ಹಳದಿ ಹಾಗೂ ಕೆಂಪು ಶಾಲು ಹಾಕಿಕೊಂಡು ಅಲೆದಾಡುವವರನ್ನು ಹೊಡೆಯುತ್ತೇವೆ ಎಂದು ಹೇಳಿಕೆ ನೀಡಿ ಉದ್ಧಟತನ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿಗೆ ನುಗ್ಗಿ ಕನ್ನಡ ಬಾವುಟ ಹಾರಿಸಲು ಮುಂದಾಗಿದ್ದ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇದೇ ಸಂದರ್ಭದಲ್ಲಿ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ಕೆಲ ಹೊತ್ತು ವಾಗ್ವಾದವೂ ನಡೆಯಿತು. ಶಿವಸೇನೆ, ಎಮ್‍ಇಎಸ್ ಪುಂಡಾಟ ಹಿನ್ನೆಲೆಯಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕರವೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಆಕ್ರೋಶ ಹೊರಹಾಕಿದ ಕಾರ್ಯಕರ್ತರು ಎಮ್‍ಇಎಸ್, ಶಿವಸೇನೆ ವಿರುದ್ಧ ಧಿಕ್ಕಾರ ಕೂಗಿದರು.
ಬೆಳಗಾವಿ ನಮ್ಮದು ಎಂಬ ಘೋಷಣೆ ಕೂಗುವ ಮೂಲಕ ಶಿವಸೇನೆ, ಎಮ್‍ಇಎಸ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು