ಕರಬಖ್‌ನಿಂದ ಅರ್ಮೆನಿಯಾದತ್ತ ನಿರಾಶ್ರಿತರರು

ಯೆರೆವಾನ್ (ಅರ್ಮೆನಿಯಾ), ಸೆ.೨೫- ಒಂದು ದಿನದ ಸೇನಾ ಕಾರ್ಯಾಚರಣೆ ನಡೆಸಿ ಕರಬಖ್ ಪ್ರದೇಶವನ್ನು ಅಝರ್‌ಬೈಜಾನ್ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನಾಂಗೀಯ ಅರ್ಮೇನಿಯನ್ ನಿರಾಶ್ರಿತರು ಇದೀಗ ನಾಗೋರ್ನೊ-ಕರಬಖ್‌ನಿಂದ ಅರ್ಮಿನಿಯಾದತ್ತ ಹೊರಡಲು ಆರಂಭಿಸಿದ್ದಾರೆ.
ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ನಾಗೋರ್ನೊ-ಕರಾಬಖ್ ಭೂಭಾಗಕ್ಕೆ ಸಂಬಂಧಿಸಿದಂತೆ ಅರ್ಮೆನಿಯಾ ಹಾಗೂ ಅಝರ್‌ಬೈಜಾನ್ ನಡುವೆ ಸಂಘರ್ಷ ಏರ್ಪಡುತ್ತಲೇ ಇತ್ತು. ಆದರೆ ಕೆಲದಿನಗಳ ಹಿಂದೆ ಇದೇ ಕರಬಖ್ ಮೇಲೆ ಅಝರ್‌ಬೈಜಾನ್ ಸೇನೆ ಹಠಾತ್ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಆದರೆ ಅತ್ತ ಇಲ್ಲಿನ ಪ್ರತ್ಯೇಕತಾವಾದಿಗಳಿಗೆ ಅರ್ಮೆನಿಯಾ ಯಾವುದೇ ರೀತಿಯಲ್ಲಿ ಸಹಾಯ ಒದಗಿಸದ ಹಿನ್ನೆಲೆಯಲ್ಲಿ ಅಝರ್‌ಬೈಜಾನ್ ಮುಂದೆ ಶರಣಾಗಿದ್ದರು. ಹಾಗಾಗಿ ಒಂದು ದಿನದಲ್ಲೇ ಮಿಲಿಟರಿ ಕಾರ್ಯಾಚರಣೆ ಅಂತ್ಯಗೊಂಡಿತ್ತು. ಸದ್ಯ ಕರಬಖ್‌ನಲ್ಲಿರುವ ಜನಾಂಗೀಯ ಅರ್ಮೇನಿಯನ್ ನಿರಾಶ್ರಿತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಲ್ಲ ಎಂದು ಅಝರ್‌ಬೈಜಾನ್ ಪ್ರಧಾನಿ ನಿಕೋಲ್ ಪಶಿನ್‌ಯಾನ್ ಘೋಷಿಸಿದ್ದರೂ, ಮುಂದಿನ ದಿನಗಳಲ್ಲಿ ಹತ್ಯೆ ಪ್ರಕರಣ ನಡೆಯುವ ಸಾಧ್ಯತೆ ಇದೆ ಎಂದು ಮಾನವ ಹಕ್ಕುಗಳ ನಾಯಕರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಆದಿತ್ಯವಾರದಿಂದ ಕರಬಖ್‌ನಲ್ಲಿರುವ ನಿರಾಶ್ರಿತರು ಅರ್ಮೆನಿಯಾದತ್ತ ತೆರಳಲು ಆರಂಭಿಸಿದ್ದಾರೆ. ಇನ್ನು ನಿರಾಶ್ರಿತರಿಗೆ ಎಲ್ಲಾ ರೀತಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಅರ್ಮೆನಿಯಾ ಪ್ರಧಾನಿ ಈಗಾಗಲೇ ಸೂಚಿಸಿದ್ದಾರೆ. ಇನ್ನು ಮೂಲಗಳ ಪ್ರಕಾರ ಸುಮಾರು ೧.೨೦ ಲಕ್ಷ ಅರ್ಮೆನಿಯಾ ನಿರಾಶ್ರಿತರು ಕರಬಖ್‌ನಲ್ಲಿದ್ದು, ಇವರ ಭವಿಷ್ಯದ ಬಗ್ಗೆ ಕೂಡ ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿದೆ.