ಕರಡಿ ಸಂಶಯಾಸ್ಪದ ಸಾವು

ಅರಸೀಕೆರೆ, ನ. ೧೫- ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಕರಡಿಯ ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಅಂತ್ಯ ಸಂಸ್ಕಾರ ನಡೆಸಿದ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ದಾಸೀಹಳ್ಳಿ ಗ್ರಾಮದ ಹೊರವಲಯದ ಹಿಡುವಳಿ ಜಮೀನಿನಲ್ಲಿ ಕರಡಿಯೊಂದು ಮೃತಪಟ್ಟಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವಲಯ ಅರಣ್ಯಾಧಿಕಾರಿ ಅಮಿತ್ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಇಲಾಖೆಯ ನಿಯಮಾನುಸಾರ ಪಶು ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಾಮೇನಹಳ್ಳಿ ಮೀಸಲು ಅರಣ್ಯದಲ್ಲಿ ಮೃತ ಕರಡಿಯ ಅಂತ್ಯಸಂಸ್ಕಾರ ನಡೆಸಲಾಯಿತು.
ಈ ಕುರಿತು ಸುದ್ದಿಗಾರರಿಗೆ ವಲಯ ಅರಣ್ಯಾಧಿಕಾರಿ ಅಮಿತ್ ಮಾಹಿತಿ ನೀಡಿ, ಮೃತ ಕರಡಿಯು ಎರಡು ವರ್ಷ ಆಸುಪಾಸಿನ ಗಂಡು ಮರಿ ಆಗಿದೆ. ಸೋಂಕಿನಿಂದ ಮೃತಪಟ್ಟಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ನಿಖರವಾದ ಕಾರಣ ತಿಳಿಯಲಿದೆ ಎಂದು ಹೇಳಿದರು.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಕರಡಿ, ಚಿರತೆ ಸೇರಿದಂತೆ ಮತ್ಯಾವುದೇ ರೀತಿಯ ಕಾಡು ಪ್ರಾಣಿಗಳ ಚಲನ ವಲನಗಳು ಕಂಡು ಬಂದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಆ ಕಾಡು ಪ್ರಾಣಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗುವುದು. ವನ್ಯಮೃಗ ಸಂಪತ್ತು ಸಂರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿ ಇಲಾಖೆಗೆ ಬೇಕಿದೆ ಎಂದು ಮನವಿ ಮಾಡಿದರು.
ಮೃತ ಕರಡಿಯ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯ ಹನುಮಂತಪ್ಪ ನಡೆಸಿದರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಧನಂಜಯ್ಯ, ಅರಣ್ಯ ರಕ್ಷಕರಾದ ಪುನೀತ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.