ಕರಡಿ, ಚಿರತೆ ಧಾಮ ಸ್ಥಾಪನೆಗೆ ಆಗ್ರಹ

ಗ೦ಗಾವತಿ, ನ.೦೫: ಏಳುಗುಡ್ಡ ಸಾಲಿನ ವ್ಯಾಪ್ತಿಯಲ್ಲಿ ಕರಡಿ, ಚಿರತೆ ಧಾಮ ಸ್ಥಾಪನೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆಯ ಒಂದು ಕಾರ್ಯಾಲಯ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಚಾರಣ ಬಳಗದ ಸಂಚಾಲಕ, ದಂತ ವೈದ್ಯ ಡಾ.ಶಿವಕುಮಾರ ಮಾಲಿಪಾಟೀಲ್ ನೇತೃತ್ವದಲ್ಲಿ ಚಾರಣ ಬಳಗದ ಸದಸ್ಯರು ನಗರದ ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರ್ ಎಂ.ರೇಣುಕಾ ಅವರಿಗೆ ಗುರುವಾರ ಸಂಜೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಏಳುಗುಡ್ಡ ಸಾಲಿನ ವ್ಯಾಪ್ತಿಯಲ್ಲಿ ಕರಡಿ, ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಿಗೆ, ಪ್ರವಾಸಿಗರಿಗೆ, ಹೊಲ ಗದ್ದೆಯಲ್ಲಿ ಕೆಲಸ ಮಾಡುವವರಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಲದೇ, ಆನೆಗೊಂದಿ ಭಾಗ ಇತ್ತೀಚೆಗೆ ಬಹಳಷ್ಟು ಪ್ರಸಿದ್ಧಿ ಪಡೆಯುತ್ತಿದ್ದು, ಬೇರೆ ಬೇರೆ ರಾಜ್ಯ, ದೇಶಗಳಿಂದ ಪ್ರವಾಸಿಗರು ಬರುವ ಪ್ರಮಾಣ ದುಪ್ಪಟ್ಟಾಗಿದೆ. ಹಾಗಾಗಿ ಅವರಿಗೆ ರಕ್ಷಣೆ ನೀಡಲು ಸಿಬ್ಬಂದಿ ನಿಯೋಜಿಸಬೇಕು. ಪ್ರಾಣಿಗಳು ಇರುವ ಬಗ್ಗೆ ಪ್ರವಾಸಿಗರಿಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಕರಡಿ ಮತ್ತು ಚಿರತೆ ಧಾಮವನ್ನು ಸ್ಥಾಪಿಸಬೇಕು. ಪ್ರವಾಸೋದ್ಯಮ ಇಲಾಖೆಯ ಒಂದು ಕಾರ್ಯಾಲಯ ತೆರೆದು ಅಧಿಕೃತ ಮಾರ್ಗದರ್ಶಕರನ್ನು (ಗೈಡ್ಸ್) ನೇಮಿಸಬೇಕು. ಗುಡ್ಡದಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಯ ಸದ್ದಿನಿಂದ ಪ್ರಾಣಿಗಳು ಆಹಾರ ಹುಡುಕಿಕೊಂಡು ಊರಿನ ಕಡೆ ಬರುತ್ತಿದ್ದು, ಕಲ್ಲು ಗಣಿಗಾರಿಕೆ ನಿಲ್ಲಿಸಿ, ಪ್ರಾಣಿಗಳು ಕಾಡಿನಲ್ಲಿ ಇರಲು ಅನುಕೂಲ ಮಾಡಿಕೊಡಬೇಕು. ಅರಣ್ಯ ಇಲಾಖೆ ಹಾಗೂ ಸರ್ಕಾರದ ಇತರೆ ಇಲಾಖೆಗಳು ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಮಹಾಲಕ್ಷಿö್ಮÃ, ರಾಘವೇಂದ್ರ ಶಿರಿಗೇರಿ, ಮಂಜುನಾಥ ಗುಡ್ಲಾನೂರು, ಮೈಲಾರಪ್ಪ ಬೂದಿಹಾಳ, ಪ್ರಲ್ಹಾದ ಕುಲಕರ್ಣಿ, ಜಗದೀಶ ಮಾಲಿಪಾಟೀಲ್ ಹಾಗೂ ಚಾರಣ ಬಳಗದ ಇತರೆ ಸದಸ್ಯರು ಉಪಸ್ಥಿತರಿದ್ದರು.