ಕರಡಿಗಳ  ದಾಳಿ – ಬೆಳೆ ನಾಶ, ಪರಿಹಾರಕ್ಕೆ  ಆಗ್ರಹ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 21 :- ಕಾಳು ಕಟ್ಟುವ ಹಂತದ ಮೆಕ್ಕೆಜೋಳ ಬೆಳೆಯನ್ನು ಕರಡಿಗಳು ದಾಳಿ ನಡೆಸಿ ಸಂಪೂರ್ಣ ನಾಶ ಮಾಡಿರುವ ಘಟನೆ ತಾಲೂಕಿನ ಅಮಲಾಪುರದಲ್ಲಿ ಜರುಗಿದ್ದು ಬೆಳೆ ಕಳಕೊಂಡ ರೈತರು  ಕಂಬನಿ ಮಿಡಿದು ಪರಿಹಾರಕ್ಕೆ ಆಗ್ರಹಿಸಿದ್ದಾರೆ .
ಅಮಲಾಪುರ ಗ್ರಾಮದ ಪರಮೇಶ್ವರಮ್ಮ ಎಂಬುವರು  ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದು  ಬೆಳೆಯು ಇನ್ನೇನು ಕಾಳುಕಟ್ಟುವ ಹಂತದಲ್ಲಿರುವಾಗ ದುರಾದೃಷ್ಟ ಎಂಬಂತೆ  ಇತ್ತು ಶನಿವಾರ ರಾತ್ರಿ  ಕರಡಿಗಳ ಗುಂಪು ದಾಳಿ ಮಾಡಿ  ಸಂಪೂರ್ಣ ಬೆಳೆ ನಾಶ ಮಾಡಿ ಸಾವಿರಾರು ರೂ ಹಣ ಸಾಲ ಶೂಲ ಮಾಡಿ ಬೆಳೆದ ಬೆಳೆ ನಷ್ಟವಾಗಿದ್ದರಿಂದ  ದಿಕ್ಕು ಕಾಣದ  ರೈತ ಮಹಿಳೆ ಕಂಗಲಾಗಿದ್ದಾರೆ  ಅಷ್ಟೆ  ಅಲ್ಲದೆ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಹಲವು ರೈತರ ಜಮೀನುಗಳಿಗೆ ಕರಡಿಗಳು ಮತ್ತು ಕಾಡು ಹಂದಿಗಳು ದಾಳಿ ಮಾಡಿ ಬೆಳೆ ನಾಶ ಪಡಿಸಿವೆ. ಇದರಿಂದ ರೈತರು ಕೈಗೆ ಬಂದ ಬೆಳೆ ನಾಶವಾಗಿರುವುದರಿಂದ ಸಂಕಷ್ಟಕ್ಕೆ ಸಿಲಿಕಿದ್ದಾರೆ.
ಪರಿಹಾರಕ್ಕೆ ಆಗ್ರಹ : ಕೈಗೆ ಬಂದ ಬೆಳೆಯ ಫಸಲು ಸಿಗದೇ ಹಾಳಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಅನ್ನದಾತರ ಮೇಲೆ ಕರುಣೆ ತೋರಿಸಿ ಕಾಡುಪ್ರಾಣಿಗಳು ನಾಡಿಗೆ ಬರದಂತೆ ಮಾಡುವ ಮೂಲಕ ನಾಶವಾದ ಬೆಳೆಗೆ ಪರಿಹಾರ ನೀಡಬೇಕು ಮತ್ತು ಕಾಡುಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆ ಮಾಡುವಂತೆ ತಾಲೂಕಿನಲ್ಲಿ ಕಾಡುಪ್ರಾಣಿಗಳಿಂದ ಬೆಳೆ ಕಳಕೊಂಡ ರೈತರ ಆಗ್ರಹವಾಗಿದೆ.